ಚಾಂಪಿಯನ್ಸ್ ಟ್ರೋಫಿ: ಅರ್ಜೆಂಟೀನ ಮಹಿಳಾ ತಂಡಕ್ಕೆ ಪ್ರಶಸ್ತಿ
Update: 2016-06-27 23:41 IST
ಲಂಡನ್, ಜೂ.27: ವಿಶ್ವ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಹಾಲೆಂಡ್ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಅರ್ಜೆಂಟೀನದ ಮಹಿಳಾ ಹಾಕಿ ತಂಡ ಏಳನೆ ಬಾರಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದೆ.
ಮೊದಲಾರ್ಧದಲ್ಲಿ ಗೋಲು ಬಾರಿಸಿದ ಮಾರ್ಟಿನಾ ಕವಾಲ್ಲೆರೊ ಹಾಗೂ ನೊಯೆಲ್ ಬಾರಿಯೊನ್‌ಯೆವೊ ಅರ್ಜೆಂಟೀನಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಹಾಲೆಂಡ್ ಪರ ಇವಾ ಡಿ ಗೊಯೆಡ್ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದರು. ಆದರೆ, ಅರ್ಜೆಂಟೀನ ತಂಡ ಸತತ ಮೂರನೆ ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸಲು ಯಶಸ್ವಿಯಾಯಿತು.
ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಯುಎಸ್‌ಎ ತಂಡ ಆಸ್ಟ್ರೆಲಿಯವನ್ನು ಶೂಟೌಟ್‌ನಲ್ಲಿ 2-0 ಅಂತರದಿಂದ ಮಣಿಸಿ 1995ರ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ಜಯಿಸಿತು.