ಕುವೈಟ್: ಕೇರಳದ ಮೂವರು, ಶ್ರೀಲಂಕಾದ ಒಬ್ಬ ಪ್ರಜೆಗೆ ಗಲ್ಲು ಖಾಯಂ

Update: 2016-06-28 07:37 GMT

ಕುವೈಟ್‌ಸಿಟಿ, ಜೂನ್ 28: ಕುವೈಟ್‌ನಲ್ಲಿ ಮಾದಕವಸ್ತು ಸರಬರಾಜು ಪ್ರಕರಣದಲ್ಲಿ ಮೂವರು ಕೇರಳೀಯರ ಗಲ್ಲುಶಿಕ್ಷೆಯನ್ನು ಅಪೀಲು ಕೋರ್ಟ್ ಖಾಯಂಗೊಳಿಸಿ ತೀರ್ಪಿತ್ತಿದೆ. ಮಾದಕವಸ್ತು ಸಾಗಾಟ, ಮಾರಾಟ, ಕೈವಶದಲ್ಲಿರಿಸಿದ ಪ್ರಕರಣದಲ್ಲಿ ಮಲಪ್ಪುರಂ ಚಿಕ್ಕೋಡ್ ವಾವೂರ್ ಮಂಜೋಟ್ಟು ಚಾಲಿನ ಫೈಝಲ್,(33), ಪಾಲಕ್ಕಾಡ್ ಮಣ್ಣಾರ್ ಕ್ಕಾಡ್‌ನ ಮುಸ್ತಫಾ ಶಾಹುಲ್ ಹಮೀದ್(41),ಕಾಸರಗೋಡಿನ ಅಬೂಬಕರ್ ಸಿದ್ದೀಕ್(21)ರಿಗೆ ಕ್ರಿಮಿನಲ್ ಕೋರ್ಟ್‌ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸೋಮವಾರ ಅಪೀಲು ಕೋರ್ಟ್‌ನ ನ್ಯಾಯಾಧೀಶ ಅಲಿ ದಿರಾಯೀನ್ ಅನುಮೋದಿಸಿ ಶಿಕ್ಷೆಯನ್ನು ಖಾಯಂಗೊಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಶ್ರೀಲಂಕಾ ಪ್ರಜೆಯಾದ ಸಕ್ಲಿಯ ಸಂಪತ್‌ಗೆ(40) ವಿಧಿಸಲಾದ ಗಲ್ಲು ಶಿಕ್ಷೆಯನ್ನೂ ನ್ಯಾಯಾಧೀಶರು ಖಾಯಂಗೊಳಿಸಿದ್ದಾರೆ. ಆರೋಪಿಗಳ ಗಲ್ಲುಶಿಕ್ಷೆಯನ್ನು ಅಪೀಲು ಕೋರ್ಟ್ ಅನುಮೋದಿಸಿದ್ದರಿಂದ ಆರೋಪಿಗಳು ಇನ್ನುಸುಪ್ರೀಂಕೋರ್ಟ್‌ನ ಕದ ಬಡಿಯಬೇಕಾಗಿದೆ.

ನಾಲ್ವರು ಆರೋಪಿಗಳಿಗೆ ಮಾದಕವಸ್ತು ಪ್ರಕರಣದಲ್ಲಿ ಈವರ್ಷ ಮಾರ್ಚ್‌ನಲ್ಲಿ ಕ್ರಿಮಿನಲ್ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. 2015 ಎಪ್ರಿಲ್ ಹತ್ತೊಂಬತ್ತರಂದು ನಾಲ್ಕು ಕಿ.ಗ್ರಾಂಗೂಅಧಿಕ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ವಿಮಾನದಲ್ಲಿ ಬಂದಿಳಿದ ಆರೋಪಿಗಳಲ್ಲಿ ಒಬ್ಬಾತನಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ಹೆರಾಯಿನ್ ವಶ ಪಡಿಸಿಕೊಂಡಿದ್ದರು. ಈತ ನೀಡಿದ ಸುಳಿವು ಪ್ರಕಾರ ಜಲೀಬ್ ಅಲ್‌ಶೂಯಿಕ್ ಎಂಬಲ್ಲಿನ ವಾಸಸ್ಥಳದಿಂದ ಮಾದಕವಸ್ತು ಮತ್ತು ಅಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News