×
Ad

ವಿಶ್ವ ಚಾಂಪಿಯನ್ ಜರ್ಮನಿಗೆ ಇಟಲಿ ಕಠಿಣ ಸವಾಲು

Update: 2016-07-01 23:35 IST

 ಪ್ಯಾರಿಸ್, ಜು.1: ವಿಶ್ವ ಚಾಂಪಿಯನ್ ಜರ್ಮನಿ ತಂಡ ರವಿವಾರ ನಡೆಯಲಿರುವ ಯುರೋ ಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಇಟಲಿ ತಂಡದ ಸವಾಲನ್ನು ಎದುರಿಸಲಿದೆ.

ಜರ್ಮನಿ ತಂಡ ಫ್ರಾನ್ಸ್‌ನಲ್ಲಿ ಈ ತನಕ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಜಯಿಸಿದೆ. ಗ್ರೂಪ್ ಹಂತದಲ್ಲಿ ಪೊಲೆಂಡ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ್ದ ಜರ್ಮನಿ ಅಂತಿಮ-16ರ ಸುತ್ತಿನಲ್ಲಿ ಸ್ಲೋವಾಕಿಯ ವಿರುದ್ಧ 3-0ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು.

ಸೆಮಿಫೈನಲ್‌ಗೆ ತಲುಪಬೇಕಾದರೆ ಬಲಿಷ್ಠ ಇಟಲಿ ತಂಡವನ್ನು ಮಣಿಸಬೇಕಾದ ಕಠಿಣ ಸವಾಲು ಜರ್ಮನಿ ಮುಂದಿದೆ. ಏಕೆಂದರೆ, ಪ್ರಮುಖ ಟೂರ್ನಿಯಲ್ಲಿ ಜರ್ಮನಿ ತಂಡ ಇಟಲಿ ವಿರುದ್ಧ ಈ ವರೆಗೆ ಆಡಿರುವ 8 ಪಂದ್ಯಗಳಲ್ಲೂ ವಿಫಲವಾಗಿದೆ. 4 ಪಂದ್ಯ ಡ್ರಾ ಗೊಂಡಿದ್ದರೆ, ಇನ್ನು ನಾಲ್ಕು ಪಂದ್ಯಗಳನ್ನು ಸೋತಿದೆ.

ಈ ಬಾರಿ 9ನೆ ಯತ್ನದಲ್ಲಿ ಇಟಲಿಯನ್ನು ಸೋಲಿಸಲು ಜರ್ಮನಿ ಸಜ್ಜಾಗಿದೆ. ಗೋಲ್‌ಕೀಪರ್ ಮಾನ್ಯುಯೆಲ್ ನೆಯೆರ್ 2016ರ ಯುರೋ ಕಪ್‌ನ ಅರ್ಹತಾ ಸುತ್ತಿನ ಪಂದ್ಯದ ಬಳಿಕ ಸತತ ಐದು ಪಂದ್ಯಗಳನ್ನು ಆಡಿದ್ದಾರೆ. ಅಂತಿಮ 16ರ ಪಂದ್ಯದಲ್ಲಿ ಸ್ಲೋವಾಕಿಯ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹೊರತಾಗಿಯೂ ಜರ್ಮನಿ ತಂಡ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಕೋಚ್ ಜೋಕಿಮ್ ಲಾ ಎಚ್ಚರಿಸಿದ್ದಾರೆ.

ಹೆಡ್-ಟು-ಹೆಡ್

*ಪ್ರಮುಖ ಟೂರ್ನಿಯಲ್ಲಿ ಜರ್ಮನಿ ತಂಡ ಇಟಲಿಯನ್ನು ಈತನಕ ಸೋಲಿಸಿಲ್ಲ(4 ಡ್ರಾ-4 ಸೋಲು).

 *ಜರ್ಮನಿ ಪ್ರಮುಖ ಟೂರ್ನಿಯ ನಾಕೌಟ್ ಹಂತದಲ್ಲಿ ಇಟಲಿ ವಿರುದ್ಧ ಆಡಿರುವ ಎಲ್ಲ ನಾಲ್ಕೂ ಪಂದ್ಯಗಳನ್ನು ಸೋತಿದೆ. ಮೂರು ಬಾರಿ ವಿಶ್ವಕಪ್(1970 ಹಾಗೂ 2006ರ ಸೆಮಿಫೈನಲ್, 1982ರ ಫೈನಲ್) ಹಾಗೂ ಒಂದು ಬಾರಿ(ಸೆಮಿಫೈನಲ್-2012)ಯುರೋ ಚಾಂಪಿಯನ್‌ಶಿಪ್‌ನಲ್ಲಿ ಇಟಲಿಗೆ ಶರಣಾಗಿದೆ.

*ಜರ್ಮನಿ ಹಾಗೂ ಇಟಲಿ ಈ ವರ್ಷ ಮ್ಯೂನಿಕ್‌ನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿವೆ. ಆ ಪಂದ್ಯವನ್ನು ಜರ್ಮನಿ ತಂಡ 4-1 ಅಂತರದಿಂದ ಗೆದ್ದುಕೊಂಡಿತ್ತು. ಅದು ಇಟಲಿ ವಿರುದ್ಧ 1995ರ ಜೂನ್ ಬಳಿಕ ದಾಖಲಿಸಿದ್ದ ಮೊದಲ ಗೆಲುವಾಗಿತ್ತು.

* ಈ ಹಿಂದಿನ ಟೂರ್ನಿಯ 8 ಪಂದ್ಯಗಳಲ್ಲಿ ದಾಖಲಾದ 18 ಗೋಲುಗಳ ಪೈಕಿ 15 ಗೋಲು ದ್ವಿತೀಯಾರ್ಧದಲ್ಲಿ ದಾಖಲಾಗಿದ್ದವು.

* 2012ರ ಯುರೋ ಕಪ್‌ನ ಸೆಮಿಫೈನಲ್‌ನಲ್ಲಿ ಇಟಲಿ ತಂಡ ಮಾರಿಯೊ ಬಾಲೊಟೆಲ್ಲಿ ಮೊದಲಾರ್ಧದಲ್ಲಿ ಬಾರಿಸಿದ್ದ ಗೋಲಿನ ನೆರವಿನಿಂದ ಜರ್ಮನಿಯನ್ನು ಮಣಿಸಿತ್ತು. ಜರ್ಮನಿ

* ಜರ್ಮನಿ ಕಳೆದ ಐದು ಪ್ರಮುಖ ಟೂರ್ನಿಯಲ್ಲಿ ಕನಿಷ್ಠ ಸೆಮಿಫೈನಲ್ ತನಕ ತಲುಪಿದೆ. ಯುರೋ 2004ರಲ್ಲಿ ಸೆಮಿಫೈನಲ್‌ಗೇರಲು ವಿಫಲವಾಗಿತ್ತು. ಆಗ ಅದು ಗ್ರೂಪ್ ಹಂತದಲ್ಲೇ ಕೂಟದಿಂದ ನಿರ್ಗಮಿಸಿತ್ತು.

*ಜರ್ಮನಿ ಪ್ರಮುಖ ಟೂರ್ನಿಯಲ್ಲಿ ಆಡಿರುವ ಕಳೆದ 17 ಪಂದ್ಯಗಳ ಪೈಕಿ 14ರಲ್ಲಿ ಜಯ ಸಾಧಿಸಿದೆ. 2ರಲ್ಲಿ ಡ್ರಾ ಹಾಗೂ ಒಂದರಲ್ಲಿ ಸೋತಿದೆ(ಯುರೋ 2012, ಇಟಲಿ ವಿರುದ್ಧ ಸೆಮಿಫೈನಲ್)

*ಜರ್ಮನಿ ಯುರೋ 2016ರಲ್ಲಿ ಎದುರಾಳಿ ತಂಡಕ್ಕೆ ಈ ತನಕ ಗೋಲು ಬಿಟ್ಟುಕೊಡದ ಏಕೈಕ ತಂಡವಾಗಿದೆ. 1978ರ ವಿಶ್ವಕಪ್‌ನಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಕ್ಲೀನ್‌ಶೀಟ್ ಕಾಯ್ದುಕೊಂಡಿತ್ತು.

*ಥಾಮಸ್ ಮುಲ್ಲರ್ ಯುರೋಸ್‌ನಲ್ಲಿ 9 ಪಂದ್ಯಗಳನ್ನು ಆಡಿದ್ದರೂ ಒಂದೂ ಗೋಲು ಬಾರಿಸಿಲ್ಲ. ಮುಲ್ಲರ್ ವಿಶ್ವಕಪ್‌ನ 13 ಪಂದ್ಯಗಳಲ್ಲಿ 10 ಗೋಲು ಬಾರಿಸಿದ್ದರು.

 *ಮಾರಿಯೊ ಗೊಮೆಝ್ ಯುರೋಸ್‌ನಲ್ಲಿ ಒಟ್ಟು 5 ಗೋಲು ಬಾರಿಸಿದ್ದಾರೆ. ಈ ಮೂಲಕ ತಮ್ಮದೇ ದೇಶದ ಮಾಜಿ ಆಟಗಾರ ಜುರ್ಗೆನ್ ಕ್ಲಿನ್ಸನ್‌ರೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ.

* ಗೊಮೆಝ್ ಜರ್ಮನಿ ಪರ ಕಳೆದ 27 ಪಂದ್ಯಗಳಲ್ಲಿ ಮೊದಲಾರ್ಧದಲ್ಲಿ 21 ಗೋಲುಗಳನ್ನು ಬಾರಿಸಿದ್ದಾರೆ. ಇದರಲ್ಲಿ 2016ರಲ್ಲಿ ನಾಲ್ಕು ಬಾರಿ ಈ ಸಾಧನೆ ಮಾಡಿದ್ದಾರೆ.

ಇಟಲಿ

*ಇಟಲಿ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಿರುವ 37 ಪಂದ್ಯಗಳ ಪೈಕಿ 19ರಲ್ಲಿ ಎದುರಾಳಿಗೆ ಗೋಲು ಬಿಟ್ಟು ಕೊಡದೇ ಕ್ಲೀನ್‌ಶೀಟ್ಸ್ ಕಾಯ್ದುಕೊಂಡಿದೆ. ಯುರೋ ಟೂರ್ನಿಯ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಇಟಲಿ. ಜರ್ಮನಿ(47 ಪಂದ್ಯಗಳು, 18 ಕ್ಲೀನ್‌ಶೀಟ್ಸ್) ಎರಡನೆ ಸ್ಥಾನದಲ್ಲಿದೆ.

*ಇಟಲಿ ಈಗಾಗಲೇ ಪ್ರಸ್ತುತ ಯುರೋ ಕಪ್‌ನಲ್ಲಿ ಮೂರು ಪಂದ್ಯಗಳನ್ನು ಜಯಿಸಿದೆ. 2000ರ ಯುರೋದಲ್ಲಿ 4 ಪಂದ್ಯಗಳನ್ನು ಜಯಿಸಿತ್ತು.

*ಇಟಲಿ ಫ್ರಾನ್ಸ್‌ನ ಬೊರ್ಡಿಯಕ್ಸ್ ಸ್ಟೇಡಿಯಂನಲ್ಲಿ 1998ರ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಚಿಲಿ ವಿರುದ್ಧ 2-2 ಅಂತರದಿಂದ ಡ್ರಾ ಸಾಧಿಸಿತ್ತು.

*ಗ್ರಾಝಿಯಾನೊ ಪೆಲ್ಲೆ 2016ರ ಯುರೋ ಕಪ್‌ನಲ್ಲಿ 92 ಹಾಗೂ 91ನೆ ನಿಮಿಷದಲ್ಲಿ ಎರಡು ಗೋಲು ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News