×
Ad

ಪಾಕಿಸ್ತಾನ ಒಲಿಂಪಿಕ್ಸ್ ತಂಡದಲ್ಲಿ ಅಥ್ಲೀಟ್‌ಗಳಿಗಿಂತ ಅಧಿಕಾರಿಗಳೆೇ ಅಧಿಕ!

Update: 2016-07-01 23:43 IST

ಕರಾಚಿ, ಜು.1: ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಪಾಕಿಸ್ತಾನ ತಂಡದಲ್ಲಿ ಅಥ್ಲೀಟ್‌ಗಳಿಗಿಂತ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳೇ ಇದ್ದಾರೆ. ಇದು ಪಾಕಿಸ್ತಾನದಲ್ಲಿ ಕ್ರೀಡಾ ಬೆಳವಣಿಗೆಯಲ್ಲಿ ಆಗಿರುವ ಹಿನ್ನಡೆಯನ್ನು ಎತ್ತಿತೋರಿಸುತ್ತಿದೆ.

ರಿಯೋ ಒಲಿಂಪಿಕ್ಸ್‌ಗೆ ಪಾಕಿಸ್ತಾನ ಹಾಕಿ ತಂಡ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ 18 ಸದಸ್ಯರ ಪಾಕಿಸ್ತಾನ ತಂಡದಲ್ಲಿ ಕೇವಲ ಏಳು ಅಥ್ಲೀಟ್‌ಗಳು ಹಾಗೂ 11 ಅಧಿಕಾರಿಗಳಿದ್ದಾರೆ.

ಅಥ್ಲೀಟ್‌ಗಳ ತಂಡದಲ್ಲಿ ವಿದೇಶದ ಸ್ವಿಮ್ಮರ್‌ಗಳಾದ ಲಿಯನ್ನಾ ಸ್ವಾನ್ ಹಾಗೂ ಹ್ಯಾರಿಸ್ ಬಾಂಡೆ ಅವರಿದ್ದಾರೆ. ಟೋಕಿಯೊದಲ್ಲಿ ನೆಲೆಸಿರುವ ಜುಡೋ ಪಟು ಶಾ ಹುಸೈನ್, ಶೂಟರ್‌ಗಳಾದ ಗುಲಾಂ ಮುಸ್ತಫಾ ಹಾಗೂ ಮಿನ್ಹಾಲ್ ಸೊಹೈಲ್ ಹಾಗೂ ಇಬ್ಬರು ಓಟಗಾರರಿದ್ದಾರೆ.

ಎಲ್ಲ ಪಾಕಿಸ್ತಾನ ಅಥ್ಲೀಟ್‌ಗಳು ವೈಲ್ಡ್‌ಕಾರ್ಡ್‌ನ ಮೂಲಕ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಯಾರೂ ಕೂಡ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾಗವಹಿಸಿಲ್ಲ. ಬಾಕ್ಸರ್‌ಗಳು ಕೂಡ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಾಲ್ಗೊಂಡಿಲ್ಲ.

ಒಲಿಂಪಿಕ್ಸ್‌ನಲ್ಲಿ ವಿರಳ ಸಂಖ್ಯೆಯ ಅಥ್ಲೀಟ್‌ಗಳು ಭಾಗವಹಿಸುತ್ತಿರುವುದಕ್ಕೆ ಪಾಕಿಸ್ತಾನ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಆರಿಫ್ ಹಸನ್ ಪಾಕಿಸ್ತಾನ ಕ್ರೀಡಾ ಮಂಡಳಿಯನ್ನು ದೂಷಿಸಿದ್ದಾರೆ. ಇದೇ ಮೊದಲ ಬಾರಿ ಪಾಕಿಸ್ತಾನ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿರುವುದಕ್ಕೆ ಹಸನ್‌ಗೆ ಬೇಸರವಿದೆ.

ಹಾಕಿ ನಮ್ಮ ರಾಷ್ಟ್ರ ಕ್ರೀಡೆ. ಹಾಕಿ ತಂಡದ ಮೇಲೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸವಿತ್ತು. ಇದೀಗ ಅದೆಲ್ಲಾ ಅಸಾಧ್ಯವಾಗಿದೆ ಎಂದು ಹಸನ್ ಹೇಳಿದ್ದಾರೆ.

ಓಟಗಾರ್ತಿ ನಿರ್ಮಲಾ ಒಲಿಂಪಿಕ್ಸ್‌ಗೆ

ಹೈದರಾಬಾದ್, ಜು.1: ಭಾರತದ ಓಟಗಾರ್ತಿ ನಿರ್ಮಲಾ ಶೆರೊನ್ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಶುಕ್ರವಾರ ನಡೆದ ರಾಷ್ಟ್ರೀಯ ಅಂತರ್-ಜಿಲ್ಲಾ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಓಟದ ಸ್ಪರ್ಧೆಯಲ್ಲಿ 51.48 ನಿಮಿಷದಲ್ಲಿ ಗುರಿ ತಲುಪಿದ ನಿರ್ಮಲಾ ಒಲಿಂಪಿಕ್ಸ್‌ಗೆ ತೇರ್ಗಡೆಯಾದರು. ನಿರ್ಮಲಾ ಗೇಮ್ಸ್‌ಗೆ ತೇರ್ಗಡೆಯಾದ ಭಾರತದ 24ನೆ ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News