2024ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್?
Update: 2016-07-01 23:45 IST
ಎಡಿನ್‌ಬರ್ಗ್,ಜು.1: ಒಂದು ವೇಳೆ ರೋಮ್ ನಗರ 2024ರ ಒಲಿಂಪಿಕ್ಸ್ ಆತಿಥ್ಯದ ಹಕ್ಕನ್ನು ಪಡೆದರೆ ಕ್ರಿಕೆಟ್ ಮೊತ್ತ ಮೊದಲ ಬಾರಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಇಟಲಿ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಸೈಮನ್ ಗಾಂಬಿನೊ ಹೇಳಿದ್ದಾರೆ. ಗಾಂಬಿನೊ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆಯುತ್ತಿರುವ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ಈ ವಿಷಯ ತಿಳಿಸಿದರು.
ಒಂದು ವೇಳೆ ರೋಮ್ ನಗರ ಒಲಿಂಪಿಕ್ಸ್‌ನ ಆತಿಥ್ಯವಹಿಸಿಕೊಂಡರೆ ಕ್ರಿಕೆಟ್ ಸೇರ್ಪಡೆಯಾಗಲಿದೆ. ಆಯೋಜನಾ ಸಮಿತಿಯು ಈ ನಿಟ್ಟಿಯಲ್ಲಿ ದೃಢವಾದ ಬದ್ಧತೆ ಹೊಂದಿದೆ ಎಂದು ಗಾಂಬಿನೊ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ತಿಳಿಸಿದ್ದಾರೆ.
ರೋಮ್ ನಗರ ಪ್ಯಾರಿಸ್, ಲಾಸ್ ಏಂಜಲೀಸ್ ಹಾಗೂ ಬುಡಾಪೆಸ್ಟ್ ನಗರಗಳೊಂದಿಗೆ 2024ರ ಬೇಸಿಗೆ ಒಲಿಂಪಿಕ್ಸ್ ಗೇಮ್ಸ್ ಆತಿಥ್ಯ ವಹಿಸಿಕೊಳ್ಳಲು ಬಿಡ್ ಸಲ್ಲಿಸಿದೆ.