‘ಓಟದ ರಾಜ’ ಉಸೇನ್ ಬೋಲ್ಟ್‌ಗೆ ಗಾಯ, ಒಲಿಂಪಿಕ್ಸ್‌ಗೆ ಡೌಟ್?
ಕಿಂಗ್ಸ್‌ಸ್ಟನ್, ಜು.02: ವಿಶ್ವದ ‘ಓಟದ ರಾಜ’ ಖ್ಯಾತಿಯ ಉಸೇನ್ ಬೋಲ್ಟ್ ಒಲಿಂಪಿಕ್ಸ್ ಟ್ರಯಲ್ಸ್‌ನ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಅನುಮಾನ. ಬೋಲ್ಟ್ ಒಲಿಂಪಿಕ್ಸ್‌ಗೆ ಮೊದಲು ತನ್ನ ಫಿಟ್‌ನೆಸ್ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ.
ಇಲ್ಲಿನ ನ್ಯಾಶನಲ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಜಮೈಕಾ ನ್ಯಾಶನಲ್ ಒಲಿಂಪಿಕ್ ಟ್ರಯಲ್ಸ್‌ನ 100 ಮೀ. ಸೆಮಿಫೈನಲ್‌ನಿಂದ ಬೋಲ್ಟ್ ಹಿಂದೆ ಸರಿದಿದ್ದಾರೆ. 9.95 ಸೆಕೆಂಡ್‌ನಲ್ಲಿ ಗುರಿ ತಲುಪಿದ ಯೋಹಾನ್ ಬ್ಲೇಕ್ ಟ್ರಯಲ್ಸ್‌ನ್ನು ಜಯಿಸಿದರು. ‘‘ಕಳೆದ ರಾತ್ರಿ(ಗುರುವಾರ) ಮೊದಲ ಸುತ್ತಿನ ಪಂದ್ಯದ ವೇಳೆ ನನಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಶುಕ್ರವಾರ ರಾತ್ರಿ ಸೆಮಿಫೈನಲ್‌ನಲ್ಲಿ ಗಾಯದ ಸಮಸ್ಯೆ ಹೆಚ್ಚಾಯಿತು. ನ್ಯಾಶನಲ್ ಚಾಂಪಿಯನ್‌ಶಿಪ್‌ನ ವೈದ್ಯರು ನನ್ನ ಪರೀಕ್ಷೆ ನಡೆಸಿದರು. ಮೊದಲ ಶ್ರೇಣಿಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದೇನೆಂದು ಅವರು ತಿಳಿಸಿದ್ದಾರೆ. ನನಗೆ ಸ್ವಲ್ಪ ನೋವು ಕಾಡುತ್ತಿದೆ. ನಾನು ಈಗಾಗಲೇ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದೇನೆ’’ ಎಂದು ಬೋಲ್ಟ್ ಹೇಳಿದ್ದಾರೆ.
‘‘ನಾನು ತಕ್ಷಣವೇ ಚಿಕಿತ್ಸೆಯನ್ನು ಪಡೆಯಲಿದ್ದು, ಜುಲೈ 22 ರಂದು ನಡೆಯಲಿರುವ ಲಂಡನ್ ವಾರ್ಷಿಕ ಗೇಮ್ಸ್‌ನಲ್ಲಿ ಫಿಟ್‌ನೆಸ್ ಸಾಬೀತುಪಡಿಸಿ ರಿಯೋ ಗೇಮ್ಸ್‌ನಲ್ಲಿ ಸ್ಥಾನ ಗಿಟ್ಟಿಸುವ ವಿಶ್ವಾಸದಲ್ಲಿದ್ದೇನೆ’’ ಎಂದು ಸತತ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ 100 ಮೀ. ಹಾಗೂ 200 ಮೀ. ಓಟದಲ್ಲಿ ಚಾಂಪಿಯನ್ ಆಗಿರುವ ಬೋಲ್ಟ್ ತಿಳಿಸಿದರು.
ಬೋಲ್ಟ್ ಟ್ರಯಲ್ಸ್‌ನಿಂದ ಹಿಂದೆ ಸರಿದಿದ್ದರೂ ರಿಯೋ ಗೇಮ್ಸ್‌ನಲ್ಲಿ ಲಭ್ಯವಿರುವ ಸಾಧ್ಯತೆಯಿದೆ. ಅವರು 100 ಹಾಗೂ 200 ಮೀ. ಓಟ ಹಾಗೂ 4-100 ಮೀ. ರಿಲೇ ಸ್ಪರ್ಧೆಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದಾರೆ.