×
Ad

ಜೊಕೊವಿಕ್ ಗೆಲುವಿನ ಓಟಕ್ಕೆ ಕ್ವೆರ್ರಿ ಕಡಿವಾಣ

Update: 2016-07-02 23:20 IST

 ಲಂಡನ್, ಜು.2: ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ವಿಂಬಲ್ಡನ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅಮೆರಿಕದ ಸ್ಯಾಮ್ ಕೆರ್ರಿ ವಿಂಬಲ್ಡನ್‌ನಲ್ಲಿ ದೊಡ್ಡ ಬೇಟೆಯಾಡಿ ವಿಶ್ವದ ಗಮನ ಸೆಳೆದಿದ್ದಾರೆ.

ಶನಿವಾರ ಇಲ್ಲಿ ಮುಂದುವರಿದ ಪುರುಷರ ಸಿಂಗಲ್ಸ್‌ನ 3ನೆ ಸುತ್ತಿನ ಪಂದ್ಯದಲ್ಲಿ ಕ್ವೆರ್ರಿ ಅವರು ಜೊಕೊವಿಕ್ ವಿರುದ್ಧ 7-6(6),6-1, 3-6, 7-6(5) ಸೆಟ್‌ಗಳ ಅಂತರದಿಂದ ಮಣಿಸಿ ಭಾರೀ ಆಘಾತ ನೀಡಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು.

ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಸತತ 30 ಪಂದ್ಯಗಳನ್ನು ಜಯಿಸಿ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದ ಜೊಕೊವಿಕ್ ಈ ತನಕ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದರು. ಇದೀಗ 2009ರ ಬಳಿಕ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಮುಂಚಿತವಾಗಿ ಸೋತು ಕೂಟದಿಂದ ಹೊರ ನಡೆದಿದ್ದಾರೆ.

ಶುಕ್ರವಾರ ಇಲ್ಲಿ ಸುರಿದ ಮಳೆಯಿಂದಾಗಿ ಜೊಕೊವಿಕ್-ಕ್ವೆರ್ರಿ ಪಂದ್ಯ ರದ್ದುಗೊಂಡಾಗ ಜೊಕೊವಿಕ್ ಮೊದಲೆರಡು ಸೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದರು. ಶುಕ್ರವಾರ ಕೇವಲ 73 ನಿಮಿಷಗಳ ಪಂದ್ಯ ನಡೆದಿತ್ತು. ಶನಿವಾರ ಪಂದ್ಯ ಮುಂದುವರಿದಿದ್ದು, 29ರ ಹರೆಯದ ಕ್ವಾರ್ರಿ ಸರ್ಬಿಯ ಆಟಗಾರನಿಗೆ ಮರ್ಮಾಘಾತ ನೀಡಿದರು. ಶುಕ್ರವಾರ ವಿಂಬಲ್ಡನ್ ಟೂರ್ನಿಯಲ್ಲಿ ಕೇವಲ 3 ಗಂಟೆಗಳ ಪಂದ್ಯ ಆಡಲು ಸಾಧ್ಯವಾಗಿತ್ತು. ಶುಕ್ರವಾರ ನಿಗದಿಯಾಗಿದ್ದ 32 ಪಂದ್ಯಗಳ ಪೈಕಿ 15 ಪಂದ್ಯಗಳು ಪೂರ್ಣಗೊಂಡಿದ್ದವು.

 ಕ್ವಾರ್ರಿ ಅವರು ಜೊಕೊವಿಕ್ ವಿರುದ್ಧ 8-1 ದಾಖಲೆ ಹೊಂದಿದ್ದರು. ಜೊಕೊವಿಕ್ ಲಂಡನ್‌ನಲ್ಲಿ ಆಡಿರುವ ಕಳೆದ 7 ವಿಂಬಲ್ಡನ್ ಟೂರ್ನಿಯಲ್ಲಿ ಕನಿಷ್ಠ ಕ್ವಾರ್ಟರ್‌ಫೈನಲ್ ತನಕ ತಲುಪಿದ್ದರು. 8 ವರ್ಷಗಳ ಹಿಂದೆ ಎರಡನೆ ಸುತ್ತಿನಲ್ಲಿ ಮರಾಟ್ ಸಫಿನ್ ವಿರುದ್ಧ ಸೋತಿದ್ದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ 7 ಬಾರಿಯ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಬ್ರಿಟನ್‌ನ ಡೇನಿಯಲ್ ಎವನ್ಸ್‌ರನ್ನು 6-4, 6-2, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಈ ವರ್ಷದ ಟೂರ್ನಿಯಲ್ಲಿ ನಾಲ್ಕನೆ ಸುತ್ತಿಗೆ ತಲುಪಿದ ಮೊದಲ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.

ಜೊಕೊವಿಕ್ ಮೂರನೆ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿರುವ ಕಾರಣ ಫೆಡರರ್‌ಗೆ ಈ ವರ್ಷ ಪ್ರಶಸ್ತಿ ಗೆದ್ದುಕೊಳ್ಳುವ ಉತ್ತಮ ಅವಕಾಶವಿದೆ.

ವಿಲಿಯಮ್ಸ್ ಸಹೋದರಿಯರಿಗೆ ಜಯ

ಅಮೆರಿಕದ ವಿಲಿಯಮ್ಸ್ ಸಹೋದರಿಯರಾದ ಸೆರೆನಾ ಹಾಗೂ ವೀನಸ್ ವಿಲಿಯಮ್ಸ್ ಅಂತಿಮ-16ರ ಘಟ್ಟ ತಲುಪಿದ್ದಾರೆ.

ವಿಶ್ವದ ನಂ.1 ಹಾಗೂ ಹಾಲಿ ಚಾಂಪಿಯನ್ ಸೆರೆನಾ ತನ್ನದೇ ದೇಶದ ಕ್ರಿಸ್ಟಿನಾ ಮೆಕಾಲೆ ಅವರನ್ನು 6-7(7/9), 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಆರು ಬಾರಿಯ ವಿಂಬಲ್ಡನ್ ಚಾಂಪಿಯನ್ ಸೆರೆನಾ ಅಂತಿಮ-16ರ ಸುತ್ತಿನಲ್ಲಿ ಜರ್ಮನಿಯ ಅನ್ನಿಕಾ ಬೆಕ್‌ರನ್ನು ಎದುರಿಸಲಿದ್ದಾರೆ.

ಐದು ಬಾರಿಯ ವಿಂಬಲ್ಡನ್ ಚಾಂಪಿಯನ್ ವೀನಸ್ ರಶ್ಯದ ಯುವ ಆಟಗಾರ್ತಿ ಡರಿಯಾ ಕಸಟ್‌ಕಿನಾರನ್ನು 7-5, 4-6, 10-8 ಸೆಟ್‌ಗಳ ಅಂತರದಿಂದ ಸೋಲಿಸಿದ್ಧಾರೆ. ಈ ಗೆಲುವಿನೊಂದಿಗೆ ಅಂತಿಮ-16 ಸುತ್ತಿಗೆ ಪ್ರವೇಶಿಸಿದ್ದಾರೆ.

ಬೋಪಣ್ಣ-ಮರ್ಗಿಯಾ ಪ್ರಿ-ಕ್ವಾರ್ಟರ್‌ಗೆ

ಲಂಡನ್, ಜು.2: ರೋಹನ್ ಬೋಪಣ್ಣ ರೊಮಾನಿಯದ ಜೊತೆಗಾರ ಫ್ಲಾರಿನ್ ಮೆರ್ಗಿಯಾ ಅವರೊಂದಿಗೆ ವಿಂಬಲ್ಡನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದರು.

ಶನಿವಾರ 1 ಗಂಟೆ, 17 ನಿಮಿಷಗಳ ಕಾಲ ನಡೆದ 2ನೆ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಮೆರ್ಗಿಯಾ ಜೋಡಿ ಸ್ಲೊವಾಕಿಯಾ-ಚಿಲಿ ದೇಶದ ಆಂಡ್ರೆಜಾ ಮಾರ್ಟಿನ್ ಹಾಗೂ ಹ್ಯಾನ್ಸ್ ಪೊಡಿಪ್‌ನಿಕ್‌ರನ್ನು 7-5, 6-2 ಸೆಟ್‌ಗಳ ಅಂತರದಿಂದ ಸೋಲಿಸಿದೆ.

ಹಾಲೆಪ್ ನಾಲ್ಕನೆ ಸುತ್ತಿಗೆ ಲಗ್ಗೆ

ಲಂಡನ್, ಜು.2: ರೊಮಾನಿಯದ ಸಿಮೊನಾ ಹಾಲೆಪ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೆ ಸುತ್ತು ಪ್ರವೇಶಿಸಿದ್ದಾರೆ.

ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಡಚ್‌ನ ಕಿಕಿ ಬೆರ್ಟನ್ಸ್‌ರನ್ನು ಹಾಲೆಪ್ 6-4, 6-3 ನೇರ ಸೆಟ್‌ಗಳಿಂದ ಸದೆಬಡಿದರು. ಹಾಲೆಪ್ ವೃತ್ತಿಬದುಕಿನಲ್ಲಿ ಎರಡನೆ ಬಾರಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಜಯಿಸಿದರು.

ಕಳೆದ ತಿಂಗಳು ನಡೆದಿದ್ದ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಬೆರ್ಟೆನ್ಸ್ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆ್ಯಂಜೆಲಿಕ್ ಕರ್ಬರ್‌ರನ್ನು ಮಣಿಸಿದ್ದರು.

ಬೆರ್ಟೆನ್ಸ್ ಮೊದಲ ಗೇಮ್‌ನಲ್ಲಿ ವಿಶ್ವದ ನಂ.5ನೆ ಆಟಗಾರ್ತಿ ವಿರುದ್ಧ ಮೇಲುಗೈ ಸಾಧಿಸಿದ್ದರು. ಮುಂದಿನ ಗೇಮ್‌ನಲ್ಲಿ ತಿರುಗೇಟು ನೀಡಿದ ಹಾಲೆಪ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News