ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ
ಕಾರ್ಡಿಫ್, ಜು.3: ಇಂಗ್ಲೆಂಡ್ ತಂಡ ಇಲ್ಲಿ ನಡೆದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 122 ರನ್‌ಗಳ ಜಯ ಗಳಿಸಿದ್ದು, ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ.
ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 325 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ 42.4 ಓವರ್‌ಗಳಲ್ಲಿ ಆಲೌಟಾಯಿತು.
ಇಂಗ್ಲೆಂಡ್ ತಂಡದ ವಿಲ್ಲಿ(34ಕ್ಕೆ 4), ಪ್ಲೆಂಕೆಟ್ (44ಕ್ಕೆ 3) ಮತ್ತು ರಶೀದ್(41ಕ್ಕೆ 2) ಶ್ರೀಲಂಕಾ ತಂಡದ ಇನಿಂಗ್ಸ್‌ನ್ನು ಮುಗಿಸಿದರು. ಶ್ರೀಲಂಕಾ ತಂಡದ ಬ್ಯಾಟಿಂಗ್ ಆರಂಭದಲ್ಲೇ ಸೊರಗಿತ್ತು. 4 ಓವರ್‌ಗಳಲ್ಲಿ 9 ರನ್ ಗಳಿಸುವಷ್ಟರಲ್ಲಿ ಪೆರೆರಾ ಅವರನ್ನು ವಿಲ್ಲಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಮೆಂಡಿಸ್ ಮತ್ತು ಗುಣತಿಲಕ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಶ್ರೀಲಂಕಾ ಪರ ಚಾಂಡಿಮಾಲ್ (53) ಮಾತ್ರ ಅರ್ಧಶತಕ ಪೂರೈಸಿದರು.
ಮೆಂಡಿಸ್ 22 ರನ್ ಗಳಿಸಿದ್ದಾಗ ರನೌಟ್ ಬಲೆಗೆ ಬಿದ್ದರು. ಗುಣತಿಲಕ 72 ನಿಮಿಷಗಳ ಬ್ಯಾಟಿಂಗ್‌ನಲ್ಲಿ 45 ಎಸೆತಗಳನ್ನು ಎದುರಿಸಿದರು. 6 ಬೌಂಡರಿಗಳ ಸಹಾಯದಿಂದ 48 ರನ್ ಗಳಿಸಿ ರನೌಟಾದರು.
ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ 13 ರನ್ ಗಳಿಸಿ ರನೌಟಾದರು. ತರಂಗ (0) ಖಾತೆ ತೆರೆಯಲಿಲ್ಲ. ಶನಕ 22 ರನ್ , ಪ್ರಸನ್ನ 5 ರನ್, ಲಕ್ಮಲ್ 10 ರನ್, ಪ್ರದೀಪ್ 7 ರನ್ ಗಳಿಸಿ ಔಟಾದರು.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 324 ರನ್ ಗಳಿಸಿತ್ತು. ಜೋ ರೂಟ್ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದರು.ಅವರು 93 ರನ್ ಗಳಿಸಿ ತಂಡದ ಸ್ಕೋರ್ 300ರ ಗಡಿ ದಾಟಲು ನೆರವಾದರು. ಜೇಸನ್ ರಾಯ್ ಮತ್ತು ವಿನ್ಸ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 11.3 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 67 ರನ್ ಗಳಿಸಿದರು. ರಾಯ್ 34 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಎರಡನೆ ವಿಕೆಟ್‌ಗೆ ಜೋ ರೂಟ್ ಜೊತೆಯಾದರು. ಇವರು ಎರಡನೆ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು.ವಿನ್ಸ್ 51 ರನ್ ಗಳಿಸಿ ಗುಣತಿಲಕಗೆ ವಿಕೆಟ್ ಒಪ್ಪಿಸಿದರು.
ನಾಯಕ ಇಯಾನ್ ಮೊರ್ಗನ್ 20 ರನ್ , ಬೈರ್‌ಸ್ಟೋವ್ 22 ರನ್ ಗಳಿಸಿ ಔಟಾದರು. ರೂಟ್ 149 ನಿಮಿಷಗಳ ಬ್ಯಾಟಿಂಗ್‌ನಲ್ಲಿ 106 ಎಸೆತಗಳನ್ನು ಎದುರಿಸಿ 6 ಬೌಂಡರಿಗಳ ಸಹಾಯದಿಂದ 93 ರನ್ ಗಳಿಸಿ ಔಟಾದರು.
ಜೋ ಬಟ್ಲರ್ ಔಟಾಗದೆ 70 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್ 50 ಓವರ್‌ಗಳಲ್ಲಿ 324/7( ರೂಟ್ 93, ವಿನ್ಸ್ 51, ಬಟ್ಲರ್ 70, ರಾಯ್ 34; ಗುಣತಿಲಕ 48ಕ್ಕೆ 3).
ಶ್ರೀಲಂಕಾ 42.4 ಓವರ್‌ಗಳಲ್ಲಿ 202( ಚಾಂಡಿಮಾಲ್ 53, ಗುಣತಿಲಕ 48; ವಿಲ್ಲಿ 34ಕ್ಕೆ 4, ಪ್ಲಂಕೆಟ್ 34ಕ್ಕೆ 3).
ಪಂದ್ಯಶ್ರೇಷ್ಠ: ಜೋ ಬಟ್ಲರ್
ಸರಣಿಶ್ರೇಷ್ಠ: ಜೇಸನ್ ರಾಯ್.