×
Ad

ಪ್ರಣೀತ್‌ಗೆ ಸಿಂಗಲ್ಸ್, ಮನು-ಸುಮೀತ್‌ಗೆ ಡಬಲ್ಸ್ ಪ್ರಶಸ್ತಿ

Update: 2016-07-04 23:30 IST

ಕಾಲ್ಗರಿ(ಕೆನಡ), ಜು.4: ಕೆನಡಾ ಬ್ಯಾಡ್ಮಿಂಟನ್ ಓಪನ್‌ನಲ್ಲಿ ಭಾರತ ಡಬಲ್ ಬೋನಸ್ ಲಭಿಸಿದೆ. ಬಿ. ಸಾಯಿ ಪ್ರಣೀತ್ ಹಾಗು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಕ್ರಮವಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

 55,000 ಯುಎಸ್ ಡಾಲರ್ ಬಹುಮಾನ ಮೊತ್ತದ ಗ್ರಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 23ರ ಹರೆಯದ ಪ್ರಣೀತ್ ಕೊರಿಯಾದ ಲೀ ಹ್ಯೂನ್‌ರನ್ನು 21-12, 21-10 ಗೇಮ್‌ಗಳ ಅಂತರದಿಂದ ಮಣಿಸಿದರು. ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ಅರ್ಧಗಂಟೆಯೊಳಗೆ ಕೊನೆಗೊಂಡಿತು.

 ಏಕಪಕ್ಷೀಯವಾಗಿ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಮನು ಹಾಗೂ ಸುಮೀತ್ ರೆಡ್ಡಿ ಕೆನಡಾದ ಅಡ್ರಿಯನ್ ಲಿಯು ಹಾಗೂ ಟಾಬಿ ನಿಗ್‌ರನ್ನು 21-8, 21-14 ಗೇಮ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು.

ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಮೊದಲ ಪುರುಷರ ಡಬಲ್ಸ್ ಜೋಡಿ ಎನಿಸಿಕೊಂಡಿರುವ ಮನು ಹಾಗೂ ಸುಮೀತ್‌ಗೆ ಈ ಪ್ರಶಸ್ತಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಗಾಯದ ಸಮಸ್ಯೆಗಳು ಹಾಗೂ ಅನಿಶ್ಚಿತ ಫಾರ್ಮ್‌ನಿಂದಾಗಿ ಪ್ರಣೀತ್ ಕಳೆದ ಕೆಲವು ವರ್ಷಗಳಿಂದ ಟೂರ್ನಮೆಂಟ್‌ಗಳಿಂದ ಬೇಗನೆ ಹೊರ ನಡೆಯುತ್ತಿದ್ದರು. ಆದರೆ, ಕೆಲವೊಮ್ಮೆ ಬಲಿಷ್ಠ ಆಟಗಾರರನ್ನು ಮಣಿಸಿ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ.

2013ರ ಜೂನ್‌ನಲ್ಲಿ ಮಲೇಷ್ಯಾದಲ್ಲಿ ನಡೆದ ಥಾಯ್ಲೆಂಡ್ ಓಪನ್ ಜಿಪಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಮುಹಮ್ಮದ್ ಹಫೀಝ್ ಹಾಶಿಮ್‌ರನ್ನು ಮಣಿಸಿ ಶಾಕ್ ನೀಡಿದ್ದರು.

2013ರ ಇಂಡೋನೇಷ್ಯಾ ಓಪನ್‌ನಲ್ಲಿ ಮಾಜಿ ವಿಶ್ವ ಹಾಗೂ ಒಲಿಂಪಿಕ್ ಚಾಂಪಿಯನ್ ಇಂಡೋನೇಷ್ಯದ ತೌಫಿಕ್ ಹಿದಾಯತ್‌ರನ್ನು ಮೊದಲ ಸುತ್ತಿನಲ್ಲಿ ಸೋಲಿಸಿ ಗಮನ ಸೆಳೆದಿದ್ದರು.

ಈ ವರ್ಷ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣೀತ್ ಮಲೇಷ್ಯಾದ ಸ್ಟಾರ್ ಆಟಗಾರ ಲೀ ಚೊಂಗ್ ವೀ ಅವರನ್ನು ಮಣಿಸಿದ್ದರು. ಕೆಲವೊಮ್ಮೆ ದೈತ್ಯ ಸಂಹಾರಿಯಾಗಿ ಗೋಚರಿಸುತ್ತಿದ್ದ ಪ್ರಣೀತ್‌ಗೆ ಪ್ರಶಸ್ತಿ ಯಾವಾಗಲೂ ಕೈತಪ್ಪಿ ಹೋಗುತ್ತಿತ್ತು.

ಆದರೆ, ರವಿವಾರ ಆಂಧ್ರಪ್ರದೇಶದ ಪ್ರಣೀತ್ ಚೊಚ್ಚಲ ಗ್ರಾನ್‌ಪ್ರಿ ಕಿರೀಟವನ್ನು ಧರಿಸಿ ಪ್ರಶಸ್ತಿ ಬರ ನೀಗಿಸಿಕೊಂಡರು. ವಿಶ್ವದ ನಂ.37ನೆ ಆಟಗಾರ ಪ್ರಣೀತ್ ಅವರು ಲೀ ವಿರುದ್ಧ ಫೈನಲ್ ಪಂದ್ಯದಲ್ಲಿ ಎರಡೂ ಗೇಮ್‌ಗಳಲ್ಲಿ ಆರಂಭದಿಂದ ಅಂತ್ಯದ ತನಕ ಮುನ್ನಡೆ ಕಾಯ್ದುಕೊಂಡಿದ್ದರು. ಮೂರನೆ ಶ್ರೇಯಾಂಕದ ಕೊರಿಯಾ ಆಟಗಾರ ಯಾವ ಹಂತದಲ್ಲೂ ಪ್ರತಿ ಹೋರಾಟ ನೀಡಲಿಲ್ಲ.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಲೀ ಅಗ್ರ ಶ್ರೇಯಾಂಕದ ಅಜಯ್ ಜಯರಾಮ್‌ರನ್ನು 21-9, 21-8 ಗೇಮ್‌ಗಳಿಂದಲೂ, ಪ್ರಣೀತ್ ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಜ್‌ರನ್ನು 22-20, 19-21, 21-12 ಗೇಮ್‌ಗಳಿಂದ ಮಣಿಸಿ ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News