ಇಂದು ಮೊದಲ ಸೆಮಿಫೈನಲ್: ಪೋರ್ಚುಗಲ್-ವೇಲ್ಸ್ ಹೋರಾಟ
ಲಿಯೊನ್, ಜು.5: ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ತಡರಾತ್ರಿ ಇಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ಹಾಗೂ ವೇಲ್ಸ್ ತಂಡಗಳು ಸೆಣಸಾಡಲಿವೆ. ವೇಲ್ಸ್ 50 ವರ್ಷಗಳ ಬಳಿಕ ಪ್ರಮುಖ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಮೊದಲ ಬ್ರಿಟನ್ ತಂಡ ಎನಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಇದೇ ಮೊದಲ ಬಾರಿ ಯುರೋ ಕಪ್‌ನಲ್ಲಿ ಭಾಗವಹಿಸಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ 3-1 ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ತಲುಪಿದ್ದ ವೇಲ್ಸ್ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದೆ.
ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ವೇಲ್ಸ್ ತಂಡದ ಗಾರೆತ್ ಬಾಲೆ ಪಂದ್ಯದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ರೊನಾಲ್ಡೊ ಹಾಗೂ ಗಾರೆತ್ ರಿಯಲ್ ಮ್ಯಾಡ್ರಿಡ್ ಕ್ಲಬ್‌ನಲ್ಲಿ ಒಟ್ಟಿಗೆ ಆಡುತ್ತಾರೆ. ಫುಟ್ಬಾಲ್ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿರುವ ಇವರು 6 ವಾರಗಳ ಹಿಂದೆ ಮ್ಯಾಡ್ರಿಡ್ ತಂಡ ಎರಡನೆ ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿ ಜಯಿಸಲು ನೆರವಾಗಿದ್ದರು. ಸ್ಟೆಡ್‌ಡಿ ಲಿಯೊನ್‌ನಲ್ಲಿ ಬುಧವಾರ ರಾತ್ರಿ ನಡೆಯಲಿರುವ ಅಂತಿಮ ನಾಲ್ಕರ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ಮೇಲೆ ಭಾರೀ ನಿರೀಕ್ಷೆಯಿಡಲಾಗಿದೆ.
ಪ್ರಸ್ತುತ ಯುರೋ ಕಪ್‌ನಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿರುವ ಗಾರೆತ್ ಫುಟ್ಬಾಲ್ ಶಿಶು ವೇಲ್ಸ್ ತಂಡ ಯುರೋ ಕಪ್‌ನ ಸೆಮಿಫೈನಲ್‌ಗೆ ತಲುಪಲು ಮಹತ್ವದ ಪಾತ್ರ ವಹಿಸಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧದ ಗೆಲುವು ವೇಲ್ಸ್ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ವೇಲ್ಸ್ ತಂಡ 4 ವರ್ಷಗಳ ಹಿಂದೆ ಫಿಫಾ ರ್ಯಾಂಕಿಂಗ್‌ನಲ್ಲಿ ಅಗ್ರ-100 ಸ್ಥಾನದಿಂದ ಹೊರಗಿತ್ತು. ಯುರೋ ಕಪ್‌ನ ಅರ್ಹತಾ ಸುತ್ತಿನಲ್ಲಿ 7 ಗೋಲುಗಳನ್ನು ಬಾರಿಸಿದ್ದ ಗೆರಾತ್, ವೇಲ್ಸ್ ತಂಡ 58 ವರ್ಷಗಳ ಬಳಿಕ ಪ್ರಮುಖ ಟೂರ್ನಿಗೆ ಅರ್ಹತೆ ಪಡೆಯಲು ನೆರವಾಗಿದ್ದರು. ಗ್ರೂಪ್ ಹಂತದಲ್ಲಿ ನೆರೆ ರಾಷ್ಟ್ರ ಇಂಗ್ಲೆಂಡ್‌ಗಿಂತಲೂ ಉತ್ತಮ ಪ್ರದರ್ಶನ ನೀಡಿದ ವೇಲ್ಸ್ 24 ವರ್ಷಗಳ ಬಳಿಕ ತನ್ನ ಚೊಚ್ಚಲ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿತ್ತು. 1992ರಲ್ಲಿ ಸ್ವೀಡನ್ ತಂಡ ತನ್ನ ಚೊಚ್ಚಲ ಪ್ರವೇಶದಲ್ಲೇ ಸೆಮಿಫೈನಲ್‌ಗೆ ತಲುಪಿತ್ತು.
ಮತ್ತೊಂದೆಡೆ, ಪೋರ್ಚುಗಲ್ ತಂಡ ಕಳೆದ ಐದು ಟೂರ್ನಿಗಳಲ್ಲಿ ನಾಲ್ಕನೆ ಬಾರಿ ಸೆಮಿಫೈನಲ್‌ಗೆ ತಲುಪಿದೆ. ಗ್ರೂಪ್ ಹಂತದಲ್ಲಿ ಎಲ್ಲ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಅಂತಿಮ-16 ಹಂತ ತಲುಪಿತ್ತು. ಕ್ರೊಯೇಷಿಯ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಜಯ ಸಾಧಿಸಿದ್ದ ಪೋರ್ಚುಗಲ್ ತಂಡ ಪೊಲೆಂಡ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿತ್ತು.
ರೊನಾಲ್ಡೊ ಕಳಪೆ ಪ್ರದರ್ಶನ ಪೋರ್ಚುಗಲ್‌ಗೆ ತಲೆ ನೋವಾಗಿ ಪರಿಣಮಿಸಿದೆ. ಟೂರ್ನಿಯಲ್ಲಿ ಈ ತನಕ ಆಡಿರುವ 5 ಪಂದ್ಯಗಳಲ್ಲಿ ರೊನಾಲ್ಡೊ ಕೇವಲ 2 ಗೋಲು ಬಾರಿಸಿದ್ದಾರೆ. ಎರಡು ಗೋಲನ್ನು ಹಂಗೇರಿ ತಂಡದ ವಿರುದ್ಧ ಬಾರಿಸಿದ್ದರು.
‘‘ರೊನಾಲ್ಡೊ ಗೋಲು ಬಾರಿಸದೇ ಇದ್ದರೆ ಅವರು ಚೆನ್ನಾಗಿ ಆಡಿಲ್ಲ ಎಂದರ್ಥವಲ್ಲ. ರೊನಾಲ್ಡೊ ನಮ್ಮ ತಂಡದ ಮಾದರಿ ನಾಯಕ. ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಪಂದ್ಯವನ್ನು ಗೆಲ್ಲಲು ಬಯಸಿದ್ದಾರೆ’’ ಎಂದು ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೊಸ್ ಹೇಳಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ರೊನಾಲ್ಡೊ ಗೋಲು ಬಾರಿಸಲು ಸಫಲರಾದರೆ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಗೋಲು(9) ಬಾರಿಸಿದ್ದ ಮೈಕಲ್ ಪ್ಲಾಟಿನಿ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಪೋರ್ಚುಗಲ್ ತಂಡ ಅಮಾನತುಗೊಂಡಿರುವ ಮಿಡ್ ಫೀಲ್ಡರ್ ವಿಲಿಯಮ್ ಕರ್ವಾಲ್ಹೊ ಅನುಪಸ್ಥಿತಿಯಲ್ಲಿ ಆಡಲಿದೆ. ಪೋರ್ಚುಗಲ್‌ನ ಶ್ರೇಷ್ಠ ಆಟಗಾರ ಪೇಪೆ ಸೋಮವಾರದ ತರಬೇತಿ ಶಿಬಿರದಿಂದ ದೂರ ಉಳಿದಿದ್ದರು. ಬುಧವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯಶಾಲಿಯಾಗುವ ತಂಡ ಜು.10ರಂದು ನಡೆಯಲಿರುವ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ಅಥವಾ ಆತಿಥೇಯ ಫ್ರಾನ್ಸ್ ತಂಡವನ್ನು ಎದುರಿಸಲಿದೆ.