ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿಂಡೀಸ್‌ಗೆ ಪಯಣ
ಮುಂಬಯಿ, ಜು.6: ವಿರಾಟ್ ಕೊಹ್ಲಿ ನೇತೃತ್ವದ 16 ಸದಸ್ಯರನ್ನು ಒಳಗೊಂಡ ಭಾರತೀಯ ಟೆಸ್ಟ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಮಂಗಳವಾರ ತಡರಾತ್ರಿ ಮುಂಬೈನಿಂದ ವೆಸ್ಟ್‌ಇಂಡೀಸ್‌ಗೆ ಪ್ರಯಾಣ ಬೆಳೆಸಿತು.
ತಂಡದೊಂದಿಗೆ ಹೊಸ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹಾಗೂ ಇತರ ಸಹಾಯಕ ಸಿಬ್ಬಂದಿಗಳು ತೆರಳಿದರು. ಜು.9 ಹಾಗೂ 10ರಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯ ಆಡುವ ಮೂಲಕ ಭಾರತ ವಿಂಡೀಸ್ ಪ್ರವಾಸವನ್ನು ಆರಂಭಿಸಲಿದೆ. ಜು.14 ರಿಂದ 16ರ ತನಕ ಎರಡನೆ ಅಭ್ಯಾಸ ಪಂದ್ಯವನ್ನು ಆಡಲಿದೆ.
ಜು.21 ರಿಂದ 25ರ ತನಕ ಆ್ಯಂಟಿಗುವಾದ ವಿವಿಯನ್ ರಿಚರ್ಡ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಭಾರತ ಟೆಸ್ಟ್ ಸರಣಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಉಳಿದ ಮೂರು ಟೆಸ್ಟ್ ಪಂದ್ಯಗಳು ಜಮೈಕಾ(ಜು.30-ಆ.3), ಸೈಂಟ್ ಲೂಸಿಯಾ(ಆ.9-13) ಹಾಗೂ ಟ್ರಿನಿಡಾಡ್(ಆ.18-22) ನಲ್ಲಿ ನಡೆಯಲಿದೆ.
ಭಾರತ 2011ರಲ್ಲಿ ಕೆರಿಬಿಯನ್ ದ್ವೀಪಕ್ಕೆ ಪ್ರವಾಸ ಕೈಗೊಂಡಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತ್ತು. 2 ಪಂದ್ಯಗಳು ಡ್ರಾ ಗೊಂಡಿದ್ದವು.
ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಮುರಳಿ ವಿಜಯ್, ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮ, ವೃದ್ದಿಮಾನ್ ಸಹಾ, ಆರ್.ಅಶ್ವಿನ್, ಅಮಿತ್ ಮಿಶ್ರಾ, ರವೀಂದ್ರ ಜಡೇಜ, ಇಶಾಂತ್ ಶರ್ಮ, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಶಾರ್ದೂಲ್ ಠಾಕೂರ್, ಸ್ಟುವರ್ಟ್ ಬಿನ್ನಿ.