ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಾಜಿ ಇಂಗ್ಲೆಂಡ್ ನಾಯಕ ಹುಸೈನ್
ಲಂಡನ್, ಜು.6: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ಲಾರ್ಡ್ಸ್‌ನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಚೆಂಡು ಕ್ಯಾಚ್ ಪಡೆಯುವ ಸ್ಪರ್ಧೆಯೊಂದರಲ್ಲಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ನಡುವೆ ಜು.14 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಮೊದಲು ಲಾರ್ಡ್ಸ್‌ನಲ್ಲಿ ಆಯೋಜಿಸಲಾಗಿದ್ದ ಅತ್ಯಂತ ಎತ್ತರದಿಂದ ಕ್ಯಾಚ್ ಪಡೆಯುವ ಸ್ಪರ್ಧೆಯಲ್ಲಿ ಹುಸೈನ್ ಹೊಸ ಸಾಧನೆ ಮಾಡಿದರು. ಕನಿಷ್ಠ 110 ಅಡಿ ಎತ್ತರದಿಂದ ಬ್ಯಾಟ್‌ಕ್ಯಾಮ್ ಡ್ರೋನ್ ಮೂಲಕ ಚೆಂಡನ್ನು ಕೆಳಕ್ಕೆ ಹಾಕಲಾಗಿತ್ತು.
ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ಕ್ಯಾಚ್ ಪಡೆಯುವುದು ಸುಲಭಸಾಧ್ಯವಿಲ್ಲ. ಹುಸೈನ್ ಮೊದಲ ಯತ್ನದಲ್ಲಿ ಕ್ಯಾಚ್ ಪಡೆಯಲು ಸಫಲರಾಗಿದ್ದರು. ಇಂಗ್ಲೆಂಡ್‌ನ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿರುವ ಹುಸೈನ್ ತನ್ನ ಎರಡನೆ ಪ್ರಯತ್ನದಲ್ಲಿ 32 ಮೀ. ಎತ್ತರದಿಂದ ಬಂದ ಕ್ರಿಕೆಟ್ ಚೆಂಡನ್ನು ಕ್ಯಾಚ್ ಪಡೆಯಲು ಯಶಸ್ವಿಯಾದರು.
ಇಷ್ಟಕ್ಕೆ ತೃಪ್ತರಾಗದ ಅವರು ಮೂರನೆ ಬಾರಿ 49 ಮೀಟರ್ ಎತ್ತರದಿಂದ ಬಂದ ಚೆಂಡನ್ನು ಹಿಡಿದು ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದರು.
ಪ್ರಸ್ತುತ ಸ್ಕೈ ಸ್ಪೋರ್ಟ್ಸ್ ಚಾನಲ್‌ನಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹುಸೈನ್ 1999 ರಿಂದ 2003ರ ತನಕ ಇಂಗ್ಲೆಂಡ್‌ನ ನಾಯಕನಾಗಿ ಕಾರ್ಯನಿರ್ವಹಿಸಿದ್ದರು.