‘ಬ್ಲೇಡ್ ರನ್ನರ್’ ಆಸ್ಕರ್ ಪಿಸ್ಟೋರಿಯಸ್‌ಗೆ ಆರು ವರ್ಷ ಜೈಲು ಸಜೆ
ಪ್ರಿಟೋರಿಯ, ಜು.6: ಗೆಳತಿ ರೀವಾ ಸ್ಟೀವನ್ ಕ್ಯಾಂಪ್‌ರನ್ನು ಹತ್ಯೆಗೈದ ಆರೋಪದಲ್ಲಿ ದಕ್ಷಿಣ ಆಫ್ರಿಕದ ‘ಬ್ಲೇಡ್‌ರನ್ನರ್’ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್‌ಗೆ ದಕ್ಷಿಣ ಆಪ್ರಿಕದ ನ್ಯಾಯಾಲಯ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಬುಧವಾರ ದಕ್ಷಿಣ ಆಫ್ರಿಕದ ನ್ಯಾಯಾಲಯ ಪಿಸ್ಟೋರಿಯಸ್‌ಗೆ ಶಿಕ್ಷೆ ಪ್ರಮಾಣ ಪ್ರಕಟಿಸಿತು. 2013ರಲ್ಲಿ ಪ್ರೇಮಿಗಳ ದಿನದಂದೇ ತನ್ನ ಮನೆಯಲ್ಲೇ ಪಿಸ್ಟೋರಿಯಸ್ ಗೆಳತಿ ಸ್ಟೀವನ್ ಕ್ಯಾಂಪ್‌ರನ್ನು ಗುಂಡಿಕ್ಕಿ ಸಾಯಿಸಿದ್ದರು. ಈ ಪ್ರಕರಣದಲ್ಲಿ ಪಿಸ್ಟೋರಿಯಸ್ 15 ವರ್ಷಗಳ ಜೈಲು ಶಿಕ್ಷೆ ಭೀತಿ ಎದುರಿಸುತ್ತಿದ್ದರು.
2014ರಲ್ಲಿ ಇದೇ ಪ್ರಕರಣದಲ್ಲಿ ಪಿಸ್ಟೋರಿಯಸ್ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಕಳೆದ ವರ್ಷ ದಕ್ಷಿಣ ಆಫ್ರಿಕದ ಸುಪ್ರೀಂಕೋರ್ಟ್ ಪಿಸ್ಟೋರಿಯಸ್ ನರಹತ್ಯೆ ಪ್ರಕರಣವನ್ನು ‘ಕೊಲೆ’ ಎಂದು ಪರಿಗಣಿಸಿತ್ತು.
ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ವಿಕಲಚೇತನ ಪಿಸ್ಟೋರಿಯಸ್‌ಗೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಪಿಸ್ಟೋರಿಯಸ್ ಪರ ವಕೀಲ ಥೊಕೊಝಿಲ್ ಮಸಿಪಾ ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ, ಪ್ರಾಸಿಕ್ಯೂಟರ್‌ಗಳು, ಪಿಸ್ಟೋರಿಯಸ್ ಉದ್ದೇಶಪೂರ್ವಕವಾಗಿ ತನ್ನ ಗೆಳತಿಯನ್ನು ಹತ್ಯೆಗೈದಿದ್ದರು ಎಂದು ಪ್ರತಿವಾದಿಸಿದ್ದರು.
ಶಿಕ್ಷೆಯ ಪ್ರಮಾಣ ಪ್ರಕಟಿಸುವಾಗ ಕೋರ್ಟ್‌ರೂಮ್‌ನಲ್ಲಿ ಪಿಸ್ಟೋರಿಯಸ್ ಹೆತ್ತವರು, ಸಂಬಂಧಿಕರು, ಮೃತ ಸ್ಟೀವನ್‌ಕ್ಯಾಂಪ್ ಸಂಬಂಧಿಕರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
ನ್ಯಾಯಾಧೀಶರು ಶಿಕ್ಷೆಯನ್ನು ಪ್ರಕಟಿಸುವಾಗ ಪಿಸ್ಟೋರಿಯಸ್ ಶಾಂತಚಿತ್ತದಿಂದ ತಲೆ ಎತ್ತಿ ಕುಳಿತ್ತಿದ್ದರು.