×
Ad

ಬುಧಿಯಾ ನಾಪತ್ತೆಯಾಗಿಲ್ಲ, ಶೀಘ್ರವೇ ವಾಪಸಾಗಲಿದ್ದಾನೆ: ಒಡಿಶಾ ಸರಕಾರ

Update: 2016-07-08 23:38 IST

 ಭುವನೇಶ್ವರ, ಜು.8: ಮ್ಯಾರಥಾನ್ ಓಟದ ಮೂಲಕ ಗಮನ ಸೆಳೆದಿರುವ ಬಾಲಕ ಬುಧಿಯಾ ಸಿಂಗ್ ನಾಪತ್ತೆಯಾಗಿಲ್ಲ. ಮುಂದಿನ  ಕೆೆಲವೇ ದಿನಗಳಲ್ಲಿ ಕ್ರೀಡಾ ಹಾಸ್ಟೆಲ್‌ಗೆ ವಾಪಸಾಗಲಿದ್ದಾನೆ ಎಂದು ಒಡಿಶಾ ಸರಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ನಾವು ನಯಾಗಢದಲ್ಲಿದ್ದೇವೆಂದು ಬುಧಿಯಾಸಿಂಗ್ ತಾಯಿ ಗುರುವಾರ ಸ್ಥಳೀಯ ನ್ಯೂಸ್ ಚಾನಲ್‌ಗೆ ತಿಳಿಸಿದ್ದರು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಆತ ಕ್ರೀಡಾ ಹಾಸ್ಟೆಲ್‌ಗೆ ವಾಪಸಾಗಲಿದ್ದಾನೆ ಎಂದು ರಾಜ್ಯದ ಕ್ರೀಡಾ ಹಾಗೂ ಯುವಜನ ವ್ಯವಹಾರ ಕಾರ್ಯದರ್ಶಿ ಸಸ್ವಾತ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು. ಮ್ಯಾರಥಾನ್ ಬಾಲಕ ಬುಧಿಯಾ ನಾಪತ್ತೆಯಾಗಿದ್ದಾಗಿ ವರದಿಯಾಗಿತ್ತು.

ಕಳೆದ ತಿಂಗಳು ಬೇಸಿಗೆ ರಜೆ ಕೊನೆಗೊಂಡ ಬಳಿಕ ಬುಧಿಯಾ ಕ್ರೀಡಾ ಹಾಸ್ಟೆಲ್‌ಗೆ ವಾಪಸಾಗಿಲ್ಲ. ಬುಧಿಯಾರಲ್ಲದೆ ಇನ್ನೂ ಎಂಟು ಮಂದಿ ಕ್ರೀಡಾಳುಗಳು ಹಾಸ್ಟೆಲ್‌ಗೆ ಮರಳಿಲ್ಲ. ಕಳಿಂಗ ಸ್ಟೇಡಿಯಂನಲ್ಲಿರುವ ಸಾಯ್ ಹಾಸ್ಟೆಲ್ ಆರಂಭವಾದ ಬಳಿಕ ಎಲ್ಲರೂ ಮರಳಲಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

2006ರ ಮೇನಲ್ಲಿ ನಾಲ್ಕರ ಹರೆಯದ ಬುಧಿಯಾ ಪುರಿಯಿಂದ ಭುವನೇಶ್ವರದ ತನಕ 65 ಕಿ.ಮೀ. ದೂರವನ್ನು ಮ್ಯಾರಥಾನ್ ಓಟದ ಮೂಲಕ ಏಳು ಗಂಟೆಯಲ್ಲಿ ಗುರಿ ತಲುಪಿ ನೂತನ ಲಿಮ್ಕಾ ದಾಖಲೆ ಬರೆದಿದ್ದ. ಈ ದಾಖಲೆಯ ಮೂಲಕ ಈ ಬಾಲಕ ಬೆಳಕಿಗೆ ಬಂದಿದ್ದ. ಮಕ್ಕಳ ಹಕ್ಕು ಸಂಘಟನೆಯ ಆಗ್ರಹದ ಮೇರೆಗೆ ರಾಜ್ಯ ಸರಕಾರ ಬುಧಿಯಾಗೆ ಕ್ರೀಡಾ ಹಾಸ್ಟೆಲ್‌ನಲ್ಲಿ ಆಶ್ರಯ ಕಲ್ಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News