×
Ad

ಆ್ಯಂಡಿ ಮರ್ರೆ ಫೈನಲ್‌ಗೆ, ಇಂದು ರಾವೊನಿಕ್ ಎದುರಾಳಿ

Update: 2016-07-09 23:34 IST

ಲಂಡನ್, ಜು. 9: ಬ್ರಿಟನ್‌ನ ಆ್ಯಂಡಿ ಮರ್ರೆ ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಮೂರನೆ ಬಾರಿ ತವರು ನೆಲದಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ತಡರಾತ್ರಿ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸೆಮಿಫೈನಲ್ ಪಂದ್ಯದಲ್ಲಿ ಮರ್ರೆ ಝೆಕ್‌ನ ಬೆರ್ಡಿಕ್‌ರನ್ನು 6-3, 6-3, 6-3 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ರವಿವಾರ ನಡೆಯಲಿರುವ ಫೈನಲ್‌ನಲ್ಲಿ ರೋಜರ್ ಫೆಡರರ್‌ಗೆ ಶಾಕ್ ನೀಡಿದ್ದ ಕೆನಡಾದ ಮಿಲೊಸ್ ರಾವೊನಿಕ್‌ರನ್ನು ಎದುರಿಸಲಿದ್ದಾರೆ.

ಲಂಡನ್‌ನ ಸೆಂಟರ್‌ಕೋರ್ಟ್‌ನಲ್ಲಿ 2 ಗಂಟೆಯೊಳಗೆ ಕೊನೆಗೊಂಡ ತನ್ನ ಏಳನೆ ವಿಂಬಲ್ಡನ್ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮರ್ರೆ ಮೂರು ವರ್ಷಗಳ ಬಳಿಕ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

29ರ ಹರೆಯದ ಮರ್ರೆ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 11ನೆ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಫ್ರೆಡ್ ಪೆರ್ರಿ ಬಳಿಕ ಪ್ರಮುಖ ಟೂರ್ನಿಯಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದರು.

‘‘ವಿಂಬಲ್ಡನ್ ಫೈನಲ್‌ಗೆ ತಲುಪಿದ್ದಕ್ಕೆ ತುಂಬಾ ಸಂತೋಷವಾಗುತ್ತಿದ್ದು, ಇದೊಂದು ನನ್ನ ದೊಡ್ಡ ಸಾಧನೆ. ರವಿವಾರ ಇನ್ನೊಂದು ಪ್ರಮುಖ ಪಂದ್ಯ ಆಡಲು ಬಾಕಿಯಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರ ವಿರುದ್ಧ ಪಂದ್ಯಗಳಲ್ಲಿ ನಾವು ಈ ಹಿಂದೆ ಮಾಡಿರುವ ಕೆಲವು ತಪ್ಪು ನಮಗೆ ನಮಗೆ ನೆರವಿಗೆ ಬರುತ್ತದೆ’’ ಎಂದು ಮರ್ರೆ ಹೇಳಿದ್ದಾರೆ.

ಶುಕ್ರವಾರ ನಡೆದಿದ್ದ ಮೊದಲ ಸೆಮಿಫೈನಲ್‌ನಲ್ಲಿ ಸ್ವಿಸ್ ಸೂಪರ್ ಸ್ಟಾರ್ ಫೆಡರರ್‌ರನ್ನು ಸೋಲಿಸಿದ್ದ 6ನೆ ಶ್ರೇಯಾಂಕದ ರಾವೊನಿಕ್ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು.

ರವಿವಾರ ನಡೆಯಲಿರುವ ಫೈನಲ್ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.2ನೆ ಆಟಗಾರ ಮರ್ರೆ ಎರಡನೆ ಬಾರಿ ವಿಂಬಲ್ಡನ್ ಟ್ರೋಫಿ ಜಯಿಸುವ ಫೇವರಿಟ್ ಆಟಗಾರನಾಗಿದ್ದಾರೆ. ಈ ವರ್ಷ ಮೂರನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿರುವ ಮರ್ರೆ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ವರ್ಷ ಆಡಿರುವ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್‌ನ ಪ್ರಶಸ್ತ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಸೋತಿದ್ದರು.

ಮರ್ರೆ ಏಳು ಪ್ರಮುಖ ಟೂರ್ನಿಯ ಫೈನಲ್‌ನಲ್ಲಿ ಜೊಕೊವಿಕ್‌ರನ್ನು ಎದುರಿಸಿದ್ದರು. 2012ರ ವಿಂಬಲ್ಡನ್ ಫೈನಲ್‌ನಲ್ಲಿ ಮರ್ರೆ, ಫೆಡರರ್‌ಗೆ ಶರಣಾಗಿದ್ದರು. ಈ ಬಾರಿ ಮರ್ರೆಗೆ ಸಾಂಪ್ರದಾಯಿಕ ಬಲಿಷ್ಠ ಆಟಗಾರ ಎದುರಾಳಿ ಪಾಳಯದಲ್ಲಿಲ್ಲ. ಮರ್ರೆ ಅವರು ರಾವೊನಿಕ್ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 6-3ರಿಂದ ಮುನ್ನಡೆಯಲ್ಲಿದ್ದಾರೆ.

ಮೂರು ವಾರಗಳ ಹಿಂದೆಯಷ್ಟೇ ಕ್ವೀನ್ಸ್ ಕ್ಲಬ್ ಫೈನಲ್‌ನಲ್ಲಿ ರಾವೊನಿಕ್‌ರನ್ನು ಮಣಿಸಿದ್ದರು.1998ರ ಬಳಿಕ ಕ್ವೀನ್ಸ್ ಕ್ಲಬ್ ಫೈನಲ್‌ನಲ್ಲಿ ಆಡಿದ್ದ ಆಟಗಾರರೇ ವಿಂಬಲ್ಡನ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News