×
Ad

ಯುರೋ ಕಪ್: ಗ್ರೀಝ್ಮನ್-ರೊನಾಲ್ಡೊ ಪೈಪೋಟಿ

Update: 2016-07-09 23:41 IST

ಪ್ಯಾರಿಸ್, ಜು.9: ಯುರೋ ಕಪ್ ಫೈನಲ್ ಫ್ರಾನ್ಸ್‌ನ ಪೋಸ್ಟರ್ ಬಾಯ್ ಆ್ಯಂಟನಿ ಗ್ರೀಝ್ಮನ್ ಹಾಗೂ ಪೋರ್ಚುಗಲ್‌ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನಡುವಿನ ಹೋರಾಟವಾಗಿ ಪರಿಗಣಿಸುವ ಸಾಧ್ಯತೆಯಿದೆ.

25ರ ಹರೆಯದ ಗ್ರೀಝ್ಮನ್ ಒಟ್ಟು 6 ಗೋಲುಗಳನ್ನು ಬಾರಿಸುವುದರೊಂದಿಗೆ ಟೂರ್ನಿಯಲ್ಲಿ ಸರ್ವಾಧಿಕ ಗೋಲು ಬಾರಿಸಿದ ಆಟಗಾರನಾಗಿದ್ದಾರೆ. ಇದೀಗ ತವರು ನೆಲದಲ್ಲಿ ಪ್ರಮುಖ ಟೂರ್ನಿಯಲ್ಲಿ ಚೊಚ್ಚಲ ಫೈನಲ್ ಆಡುವ ಅವಕಾಶವನ್ನು ಪಡೆದಿದ್ದಾರೆ. 2004ರ ಯುರೋ ಫೈನಲ್‌ನಲ್ಲಿ ಪೋರ್ಚುಗಲ್ ತಂಡ ಗ್ರೀಸ್‌ನ ವಿರುದ್ಧ ಸೋತಾಗ ರೊನಾಲ್ಡೊಗೆ 19 ವರ್ಷ. 31ರ ಹರೆಯದ ರೊನಾಲ್ಡೊಗೆ ಈ ಬಾರಿ ಫ್ರಾನ್ಸ್‌ಗೆ ಪ್ರಶಸ್ತಿ ಗೆಲ್ಲಿಸಿಕೊಡುವ ಸುವರ್ಣಾವಕಾಶ ಲಭಿಸಿದೆ.

 ಯುರೋ 2004 ನನಗೆ ವಿಶೇಷವಾಗಿತ್ತು. ಆಗ ನನಗೆ 19 ವರ್ಷವಾಗಿತ್ತು. ಅದು ನನ್ನ ಮೊದಲ ಟೂರ್ನಿಯಾಗಿತ್ತು. ನಾವೀಗ ಮತ್ತೊಮ್ಮೆ ಫೈನಲ್‌ಗೆ ತಲುಪಿದ್ದೇವೆ. ಈ ಬಾರಿ ಪ್ರಶಸ್ತಿ ಜಯಿಸುವ ವಿಶ್ವಾಸವಿದೆ. ಈ ಹಿಂದೆ ಕಣ್ಣೀರಿಟ್ಟಿದ್ದ ನಾವು ಈ ಬಾರಿ ಸಂತೋಷದಿಂದ ಟೂರ್ನಿಗೆ ವಿದಾಯ ಹೇಳಲಿದ್ದೇವೆ ಎಂದು ವೇಲ್ಸ್ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು 2-0 ಗೋಲುಗಳಿಂದ ಗೆದ್ದ ಬಳಿಕ ಸುದ್ದಿಗಾರರಿಗೆ ರೊನಾಲ್ಡೊ ತಿಳಿಸಿದ್ದರು.

ಗ್ರೀಝ್ಮನ್ ಕೂಡ ಬ್ರೆಝಿಲ್‌ನಲ್ಲಿ ನಡೆದ 2014ರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ತಂಡ ಜರ್ಮನಿ ವಿರುದ್ಧ ಸೋತಾಗ ಕಣ್ಣೀರಿಟ್ಟಿದ್ದರು. ಆರು ವಾರಗಳ ಹಿಂದೆ ನಡೆದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡ ರಿಯಲ್ ಮ್ಯಾಡ್ರಿಡ್ ವಿರುದ್ಧ ಸೋತಾಗ ಗ್ರೀಝ್ಮನ್‌ಗೆ ತುಂಬಾ ಬೇಸರವಾಗಿತ್ತು.

ಯುರೋ ಕಪ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ಅವಳಿ ಗೋಲು ಬಾರಿಸಿ ಫ್ರಾನ್ಸ್ ತಂಡಕ್ಕೆ 2-0 ಗೋಲುಗಳ ಅಂತರದ ಗೆಲುವು ತಂದುಕೊಟ್ಟಿದ್ದ ಗ್ರೀಝ್ಮನ್ ತನ್ನ ಪ್ರತಿಭೆಯ ಮೂಲಕ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ.

ಅವರು ಶ್ರೇಷ್ಠ ಆಟಗಾರ. ಈ ಯುರೋ ಕಪ್‌ನಲ್ಲಿ ಅವರು ತಂಡದ ಪ್ರಮುಖ ಆಟಗಾರ. ಸ್ಕೋರ್ ಗಳಿಸುವುದು ಮಾತ್ರವಲ್ಲ ಇತರರಿಗೂ ಗೋಲು ಬಾರಿಸಲು ನೆರವಾಗುತ್ತಾರೆ ಎಂದು ಫ್ರಾನ್ಸ್ ಕೋಚ್ ಡಿಡಿಯೆರ್ ಡೆಸ್‌ಚಾಂಪ್ ಹೇಳಿದ್ದಾರೆ.

ರೊಮಾನಿಯ ವಿರುದ್ಧ ಟೂರ್ನಿಯ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಗ್ರೀಝ್ಮನ್ ಅಲ್ಬೇನಿಯಾ ವಿರುದ್ಧ 2-0 ಅಂತರದಿಂದ ಗೆದ್ದ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ನಿರ್ಣಾಯಕ ಗೋಲು ಬಾರಿಸಿದ್ದರು.

ಐಸ್‌ಲ್ಯಾಂಡ್ ವಿರುದ್ಧದ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗ್ರೀಝ್ಮನ್ ಎರಡು ಗೋಲು ಬಾರಿಸಿದ್ದರು. ಆ ಪಂದ್ಯವನ್ನು ಫ್ರಾನ್ಸ್ 5-2 ಅಂತರದಿಂದ ಗೆದ್ದುಕೊಂಡಿತ್ತು.

1984ರ ಬಳಿಕ ಗ್ರೀಝ್ಮನ್ ಯುರೋ ಕಪ್‌ನಲ್ಲಿ ಆರು ಗೋಲು ಬಾರಿಸಿದ ಫ್ರಾನ್ಸ್‌ನ ಮೊದಲ ಆಟಗಾರ. 1984ರ ಟೂರ್ನಿಯಲ್ಲಿ ಮೈಕಲ್ ಪ್ಲಾಟಿನಿ 9 ಗೋಲುಗಳನ್ನು ಬಾರಿಸಿದ್ದರು.

ವೇಲ್ಸ್ ವಿರುದ್ಧದ ಸೆಮಿಫೈನಲ್‌ನಲ್ಲಿ ಏಕೈಕ ಗೋಲು ಬಾರಿಸಿದ್ದರೊನಾಲ್ಡೊ ಯುರೋ ಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿರುವ ಪ್ಲಾಟಿನಿ ದಾಖಲೆ ಸರಿಗಟ್ಟಿದ್ದಾರೆ.

ಗ್ರೀಝ್ಮನ್‌ರಂತೆಯೇ ರೊನಾಲ್ಡೊ ಕೂಡ ಟೂರ್ನಿಯಲ್ಲಿ ನಿಧಾನ ಆರಂಭ ಪಡೆದಿದ್ದಾರೆ. ಪೋರ್ಚುಗಲ್ ತಂಡ ಟೂರ್ನಿಯಲ್ಲಿ ಆಡಿದ್ದ ಪುಟ್ಟ ರಾಷ್ಟ್ರ ಐಸ್‌ಲ್ಯಾಂಡ್ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News