ಜಮೈಕಾ ಒಲಿಂಪಿಕ್ಸ್ ತಂಡದಲ್ಲಿ ಬೋಲ್ಟ್‌ಗೆ ಸ್ಥಾನ
ಕಿಂಗ್ಸ್ಸ್‌ಸ್ಟನ್, ಜು.9: ಜಮೈಕಾ ಒಲಿಂಪಿಕ್ಸ್ ಟ್ರಯಲ್ಸ್‌ನ ವೇಳೆ ಮೊಣಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಹಾಲಿ ಒಲಿಂಪಿಕ್ ಹಾಗೂ ವಿಶ್ವ ಓಟದ ಚಾಂಪಿಯನ್ ಉಸೇನ್ ಬೋಲ್ಟ್‌ರನ್ನು ರಿಯೋ ಒಲಿಂಪಿಕ್ಸ್‌ಗೆ ತೆರಳಲಿರುವ ಜಮೈಕಾ ತಂಡದಲ್ಲಿ ಸೋಮವಾರ ಆಯ್ಕೆ ಮಾಡಲಾಗುತ್ತದೆ ಎಂದು ಗ್ಲೀನರ್ ದಿನಪತ್ರಿಕೆ ವರದಿ ಮಾಡಿದೆ.
ಜಮೈಕಾ ಅಥ್ಲೆಟಿಕ್ಸ್ ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಶನ್(ಜೆಎಎಎ) ಆಯ್ಕೆ ಸಮಿತಿಯ ಸಭೆಯಲ್ಲಿ 100 ಹಾಗೂ 200 ಮೀ.ಓಟದಲ್ಲಿ ನಾಲ್ವರು ಓಟಗಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ರೆಝಿಲ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಮೂರು ರನ್ನರ್‌ಗಳು ಜಮೈಕಾವನ್ನು ಪ್ರತಿನಿಧಿಸಲಿದ್ದಾರೆ. ರಿಯೋ ಗೇಮ್ಸ್‌ಗೆ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡುವುದು ಟೀಮ್ ಮ್ಯಾನೇಜ್‌ಮೆಂಟ್‌ಗೆ ಬಿಟ್ಟ ವಿಚಾರ ಎನ್ನಲಾಗಿದೆ.
ಬೋಲ್ಟ್ ಕಳೆದ ವಾರ ನಡೆದಿದ್ದ ಜಮೈಕಾ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಸೆಮಿಫೈನಲ್‌ನಲ್ಲಿ ಜಯಶಾಲಿಯಾದ ಬಳಿಕ ಟೂರ್ನಿಯಿಂದ ಹಿಂದೆ ಸರಿದಿದ್ದರು. ಜಮೈಕಾದ ಸಂಭಾವ್ಯ ತಂಡದಲ್ಲಿ ಬೋಲ್ಟ್ ಸ್ಥಾನ ಪಡೆದಿರುವ ಕಾರಣ ರಿಯೋ ಗೇಮ್ಸ್‌ನಲ್ಲಿ ಮತ್ತೊಮ್ಮೆ 100, 200 ಹಾಗೂ 4-100 ಮೀ. ರಿಲೇ ವಿಭಾಗದಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ಅವಕಾಶವಿದೆ.