ಭಾರತ ವಿರುದ್ಧ ಕಠಿಣ ಸವಾಲು: ಹೋಲ್ಡರ್
ಬಾರ್ಬಡೋಸ್, ಜು.12: ‘‘ಆ್ಯಂಟಿಗುವಾದಲ್ಲಿ ಜು.21 ರಿಂದ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯುವ ಹಾಗೂ ಅನನುಭವಿ ಆಟಗಾರರನ್ನು ಒಳಗೊಂಡ ವಿಂಡೀಸ್ ತಂಡ ವಿಶ್ವದ ನಂ.2ನೆ ತಂಡ ಭಾರತ ವಿರುದ್ಧ ಕಠಿಣ ಸವಾಲು ಎದುರಿಸಲಿದೆ’’ ಎಂದು ವಿಂಡೀಸ್ ಟೆಸ್ಟ್ ನಾಯಕ ಜೇಸನ್ ಹೋಲ್ಡರ್ ಅಭಿಪ್ರಾಯಪಟ್ಟಿದ್ದಾರೆ.
‘‘ಭಾರತ ವಿರುದ್ಧ ಸರಣಿ ನಮ್ಮ ಪಾಲಿಗೆ ಕಠಿಣವಾಗಿದೆ. ವಿಶ್ವದ ದ್ವಿತೀಯ ರ್ಯಾಂಕಿನ ಭಾರತ ತಂಡ ಉತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಯುವ ತಂಡಕ್ಕೆ ಕಠಿಣ ಪರೀಕ್ಷೆ ಎದುರಾಗಿದೆ. ನಮ್ಮದು ತುಂಬಾ ಅನನುಭವಿ ತಂಡ. ಸಂಘಟಿತ ಪ್ರದರ್ಶನ ನೀಡಲು ಕೆಲವು ಸಮಯ ಬೇಕಾಗಬಹುದು. ನಮ್ಮ ತಂಡ ಬದಲಾವಣೆಯ ಹಂತದಲ್ಲಿದೆ. ನಾವು ಇದೀಗ ಉತ್ತಮ ಟೆಸ್ಟ್ ತಂಡವಾಗಿ ರೂಪುಗೊಳ್ಳುತ್ತಿದ್ದೇವೆ’’ ಎಂದು ‘ಬಾರ್ಬಡೊಸ್ ಟುಡೇ’ಗೆ ನೀಡಿರುವ ಸಂದರ್ಶನದಲ್ಲಿ ಹೋಲ್ಡರ್ ತಿಳಿಸಿದ್ದಾರೆ.
ಸರಣಿಯಲ್ಲಿ ನೀವು ಯಾವ ನಿರೀಕ್ಷೆ ಇಟ್ಟುಕೊಂಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಹೋಲ್ಡರ್,‘‘ನಾನು ಸ್ವಲ್ಪ ರನ್ ಗಳಿಸುವ ಅಗತ್ಯವಿದೆ. ಕಳೆದ ವರ್ಷ ನಾನು ಶತಕ ಗಳಿಸಿದ್ದೆ. ಈ ಸರಣಿಯಲ್ಲೂ ಕೊನೆಪಕ್ಷ ಶತಕವನ್ನು ನಿರೀಕ್ಷಿಸುತ್ತಿದ್ದೇನೆ. ಬೌಲಿಂಗ್ ವಿಷಯಕ್ಕೆ ಬಂದರೆ ನಾನು ಇನ್ನಷ್ಟೇ ಐದು ವಿಕೆಟ್ ಗೊಂಚಲು ಪಡೆಯಬೇಕಾಗಿದೆ. ನನಗೆ ಇನ್ನೂ ಕೆಲವು ಸಾಧನೆ ಮಾಡಲು ಬಾಕಿಯಿದೆ. ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆಯುವುದು ಹಾಗೂ ಶತಕ ಬಾರಿಸುವುದು ನನ್ನ ಮುಂದಿರುವ ಗುರಿ’’ ಎಂದು ಹೇಳಿದ್ದಾರೆ.