ಇಂದು ಭಾರತ-ಡಬ್ಲುಐಸಿಬಿ ಅಧ್ಯಕ್ಷರ ಇಲೆವೆನ್ ಎರಡನೆ ಅಭ್ಯಾಸ ಪಂದ್ಯ

Update: 2016-07-13 18:16 GMT

ಸೈಂಟ್‌ಕಿಟ್ಸ್, ಜು.13: ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ಗುರುವಾರ ಇಲ್ಲಿ ಆರಂಭವಾಗಲಿರುವ ಎರಡನೆ ಅಭ್ಯಾಸ ಪಂದ್ಯದಲ್ಲಿ ಆಡಲಿರುವ ಭಾರತ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ತಯಾರಿಗೆ ಅಂತಿಮ ಸ್ಪರ್ಶ ನೀಡಲು ಬಯಸಿದೆ.

 ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ ಹಾಗೂ ವಿಂಡೀಸ್ ತಂಡಗಳು ಅಂತಿಮ 11ರ ಬಳಗವನ್ನು ನಿರ್ಧರಿಸುವ ಸಾಧ್ಯತೆಯಿದೆ. ಅಭ್ಯಾಸ ಪಂದ್ಯದಲ್ಲಿ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳು ನೀಡುವ ಪ್ರದರ್ಶನವನ್ನು ಆಧರಿಸಿ ಭಾರತದ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ಜು.21 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ಗೆ ಅಂತಿಮ 11ರ ಬಳಗವನ್ನು ಆಯ್ಕೆ ಮಾಡಲಿದ್ದಾರೆ.

ಭಾರತ ಈಗಾಗಲೇ ನಡೆದಿರುವ ದ್ವಿದಿನ ಅಭ್ಯಾಸ ಪಂದ್ಯದಲ್ಲಿ ಉತ್ತಮಪ್ರದರ್ಶನ ನೀಡಿಲ್ಲ. ವೇಗದ ಬೌಲರ್‌ಗಳು ಲಯ ಕಂಡುಕೊಳ್ಳಲು ವಿಫಲರಾಗಿದ್ದರು. ಎರಡನೆ ಅಭ್ಯಾಸ ಪಂದ್ಯ ಕೊಹ್ಲಿ ಪಡೆಗೆ ಅಂತಿಮ ಅವಕಾಶವಾಗಿದೆ. ದೀರ್ಘಸಮಯದ ಬಳಿಕ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದ ವೇಗದ ಬೌಲರ್‌ಗಳಾದ ಭುವನೇಶ್ವರ ಕುಮಾರ್ ಹಾಗೂ ಮುಹಮ್ಮದ್ ಶಮಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಲೈನ್ ಹಾಗೂ ಲೆಂಗ್ತ್ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಇಶಾಂತ್ ಶರ್ಮ ಹಾಗೂ ಉಮೇಶ್ ಯಾದವ್ ಕೊಹ್ಲಿಯ ಗೇಮ್ ಪ್ಲಾನ್‌ನಲ್ಲಿರುವ ಇಬ್ಬರು ಪ್ರಮುಖ ಸದಸ್ಯರು. ಈ ಪಂದ್ಯದಲ್ಲಿ ಮುಂಬೈ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವಕಾಶ ಪಡೆಯಲಿದ್ದಾರೆಯೇ ಎಂದು ನೋಡಬೇಕಾಗಿದೆ.

ಕಳೆದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಮಿಂಚಿದ್ದು, ಎದುರಾಳಿ ವಿಂಡೀಸ್ ದಾಂಡಿಗರನ್ನು ಕಾಡಿದ್ದರು. ರಾಜೇಂದ್ರ ಹಾಗೂ ಜೆರೊಮ್ ಬ್ಲಾಕ್‌ವುಡ್‌ರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಮಿಶ್ರಾ ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿದ್ದರು.

 ವೆಸ್ಟ್‌ಇಂಡೀಸ್‌ನ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಹಿನ್ನೆಲೆಯಲ್ಲಿ ಅಭ್ಯಾಸ ಪಂದ್ಯದಲ್ಲಿ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ತನ್ನ ಕೌಶಲ್ಯವನ್ನು ಪರೀಕ್ಷೆಗೆ ಗುರಿಪಡಿಸಲಿದ್ದಾರೆ.

 ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಆರಂಭಿಕ ದಾಂಡಿಗರಾದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಅರ್ಧಶತಕ ಬಾರಿಸಿದ್ದರು. ರಾಹುಲ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಆರಂಭಿಕನ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ, ರಾಹುಲ್‌ಗೆ ಮುರಳಿ ವಿಜಯ್ ಪ್ರತಿಸ್ಪರ್ಧಿಯಾಗಿದ್ದಾರೆ.

ಚೇತೇಶ್ವರ ಪೂಜಾರ(34) ಹಾಗೂ ರೋಹಿತ್ ಶರ್ಮ(ಔಟಾಗದೆ 54) ಉತ್ತಮ ಪ್ರದರ್ಶನ ನೀಡಿದ್ದರು. ಆದಾಗ್ಯೂ, ನಾಯಕ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅಲ್ಪ ಮೊತ್ತಕ್ಕೆ ಔಟಾಗಿದ್ದರು. ಗುರುವಾರದ ಪಂದ್ಯದಲ್ಲಿ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News