ಪ್ರೊ ಕಬಡ್ಡಿ: ಬೆಂಗಳೂರಿಗೆ ಮತ್ತೊಂದು ಸೋಲು
Update: 2016-07-13 23:50 IST
ಬೆಂಗಳೂರು, ಜು.13: ನಾಲ್ಕನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಬೆಂಗಳೂರು ಬುಲ್ಸ್ ತಂಡವನ್ನು 24-22 ಅಂಕಗಳ ಅಂತರದಿಂದ ಮಣಿಸಿತು.
ಬುಧವಾರ ಇಲ್ಲಿ ಬೆಂಗಳೂರು ತಂಡ 9ನೆ ಪಂದ್ಯದಲ್ಲಿ 5ನೆ ಸೋಲು ಕಂಡಿದ್ದರೂ 21 ಅಂಕ ಗಳಿಸಿ ಆರನೆ ಸ್ಥಾನ ಕಾಯ್ದುಕೊಂಡಿದೆ. 8ನೆ ಪಂದ್ಯದಲ್ಲಿ 5ನೆ ಜಯ ಸಾಧಿಸಿದ ಜೈಪುರ ಒಟ್ಟು 30 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.
ಮೊದಲಾರ್ಧದಲ್ಲಿ 9-15 ರಿಂದ ಹಿನ್ನಡೆಯಲ್ಲಿದ್ದ ಬೆಂಗಳೂರು ದ್ವಿತೀಯಾರ್ಧದಲ್ಲಿ ನಿರಂತರವಾಗಿ ಅಂಕ ಗಳಿಸಿ ಉತ್ತಮ ಹೋರಾಟ ನೀಡಿತ್ತು. ಆದರೆ ಅಂತಿಮವಾಗಿ ಕೇವಲ 2 ಅಂಕದಿಂದ ಸೋತಿತು.
ಜೈಪುರದ ಪರ ನಾಯಕ ಜಸ್ವಿರ್ ಸಿಂಗ್ ಐದು ರೈಡ್ ಪಾಯಿಂಟ್ಸ್ ಹಾಗೂ ರಾಜೇಶ್ ನರ್ವಾಲ್ ಒಂದು ಬೋನಸ್ ಪಾಯಿಂಟ್ ಪಡೆದರು.