×
Ad

ಒಲಿಂಪಿಕ್ಸ್‌ಗೆ ತೆರಳಲಿರುವ ಎಲ್ಲ ಅಥ್ಲೀಟ್‌ಗಳು ಡೋಪಿಂಗ್ ಮುಕ್ತರಾಗಿದ್ದಾರೆ: ವಾಡಾ

Update: 2016-07-13 23:52 IST

ಹೊಸದಿಲ್ಲಿ, ಜು.13: ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಎಲ್ಲ ಕ್ರೀಡಾಳುಗಳು ಡೋಪಿಂಗ್ ಟೆಸ್ಟ್‌ಗೆ ಒಳಗಾಗಿದ್ದು, ಎಲ್ಲರೂ ಡೋಪಿಂಗ್ ಮುಕ್ತರಾಗಿದ್ದಾರೆ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ಪ್ರಧಾನ ನಿರ್ದೇಶಕ ನವೀನ್ ಅಗರ್‌ವಾಲ್ ಬುಧವಾರ ಹೇಳಿದ್ದಾರೆ.

  ‘‘ರಿಯೋಗೆ ತೆರಳಲಿರುವ ಎಲ್ಲ ಅಥ್ಲೀಟ್‌ಗಳನ್ನು ಪರೀಕ್ಷೆ ನಡೆಸಲಾಗಿದ್ದು, ಕೆಲವು ಒಮ್ಮೆ ಮಾತ್ರ ಪರೀಕ್ಷಿಸಲ್ಪಟ್ಟರೆ, ಇನ್ನೂ ಕೆಲವರು ಎರಡು ಹಾಗೂ ಮೂರು ಬಾರಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೆಲವು ಅಥ್ಲೀಟ್‌ಗಳು ವಿದೇಶದಲ್ಲಿ ತರಬೇತಿ ನಡೆಸುತ್ತಿರುವ ಕಾರಣ ಅವರನ್ನು ಎರಡನೆ ಬಾರಿ ಟೆಸ್ಟ್ ನಡೆಸಿಲ್ಲ. ವಿದೇಶದಲ್ಲಿ ತರಬೇತಿ ನಿರತರಾಗಿರುವ ಭಾರತದ ಅಥ್ಲೀಟ್‌ಗಳಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದೇವೆ’’ ಎಂದು ಅಗರ್‌ವಾಲ್ ಹೇಳಿದ್ದಾರೆ.

‘‘ಈ ಬಾರಿ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಯಾವೊಬ್ಬ ಅಥ್ಲೀಟ್ ಡೋಪಿಂಗ್ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ’’ಎಂದು ಜಮ್ಮು-ಕಾಶ್ಮೀರದ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಹೇಳಿದ್ದಾರೆ.

2004ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಇಬ್ಬರು ವೇಟ್‌ಲಿಫ್ಟರ್‌ಗಳಾದ ಸನಮಚಾ ಚಾನು ಹಾಗೂ ಪ್ರತಿಮಾ ಕುಮಾರಿ ನಿಷೇಧಿತ ದ್ರವ್ಯ ಸೇವನೆ ಆರೋಪದಲ್ಲಿ ಸಿಕ್ಕಿಬಿದ್ದಿದ್ದರು.

2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ತೆರಳಲು ಸಿದ್ಧವಾಗಿದ್ದ ಇನ್ನೊರ್ವ ಲಿಫ್ಟರ್ ಮೋನಿಕಾ ದೇವಿ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿ ಬೀಜಿಂಗ್ ವಿಮಾನ ತಪ್ಪಿಸಿಕೊಂಡಿದ್ದರು. 2012ರ ಒಲಿಂಪಿಕ್ಸ್‌ನಲ್ಲಿ ಭಾರತದ ಯಾವುದೇ ಅಥ್ಲೀಟ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News