×
Ad

ರಿಯೋಗೆ ಫಿಜಿಯೋರಹಿತ ಮಹಿಳಾ ಕುಸ್ತಿ ತಂಡ

Update: 2016-07-14 23:49 IST

ಹೊಸದಿಲ್ಲಿ, ಜು.14: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮೂವರು ಮಹಿಳಾ ಕುಸ್ತಿಪಟುಗಳು ಒಲಿಂಪಿಕ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿನೇಶ್ ಫೋಗತ್(48 ಕೆಜಿ ಫ್ರೀಸ್ಟೈಲ್), ಬಬತಾಕುಮಾರಿ(53 ಕೆಜಿ ಫ್ರೀಸ್ಟೈಲ್) ಹಾಗೂ ಸಾಕ್ಷಿ ಮಲಿಕ್(58ಕೆಜಿ ಫ್ರೀಸ್ಟೈಲ್) ಬ್ರೆಝಿಲ್‌ನ ರಿಯೊ ಡಿಜನೈರೊದಲ್ಲಿ ನಡೆಯಲಿರುವ 2016ರ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

 ಈ ನಡುವೆ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಒಲಿಂಪಿಕ್‌ನಲ್ಲಿ ಭಾಗವಹಿಸಲಿರುವ ಕುಸ್ತಿ ತಂಡದೊಂದಿಗೆ ಕೇವಲ ಓರ್ವ ಪುರುಷರ ಫಿಸಿಯೋಥೆರಪಿಸ್ಟ್‌ರನ್ನು ಕಳುಹಿಸಿಕೊಡಲು ನಿರ್ಧರಿಸಿರುವುದು ಆಘಾತಕಾರಿ ವಿಷಯವಾಗಿದೆ. ಕುಸ್ತಿತಂಡದಲ್ಲಿ ಐವರು ಪುರುಷರು ಹಾಗೂ ಮೂವರು ಮಹಿಳಾ ಸ್ಪರ್ಧಿಗಳಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಫಿಸಿಯೋ ಕಳುಹಿಸದೇ ಇರುವುದು ವಿವಾದವನ್ನು ಸೃಷ್ಟಿಸಿದೆ.

ಸೋನಿಪತ್‌ನಲ್ಲಿ ನಡೆದಿದ್ದ ತರಬೇತಿ ಶಿಬಿರದಲ್ಲಿ ಮಹಿಳಾ ಫಿಸಿಯೋ ರುಚಾ ಕಶಲ್ಕರ್ ಸಹಿತ ಮೂವರು ಫಿಜಿಯೋಗಳಿದ್ದರು. ರುಚಾ ಮಹಿಳಾ ಕುಸ್ತಿಪಟುಗಳನ್ನು ನೋಡಿಕೊಳ್ಳುತ್ತಿದ್ದರೆ, ಬ್ರಜೇಶ್ ಕುಮಾರ್ ಹಾಗೂ ಧೀರೇಂದ್ರ ಪ್ರತಾಪ್ ಪುರುಷ ಕುಸ್ತಿಪಟುಗಳ ಬಗ್ಗೆ ನಿಗಾವಹಿಸಿದ್ದರು.

‘‘ರಿಯೋದಲ್ಲಿ ಯುವತಿಯರೊಂದಿಗೆ ಮಹಿಳಾ ಫಿಜಿಯೋ ಇರುತ್ತಿದ್ದರೆ ಉತ್ತಮವಾಗಿರುತ್ತಿತ್ತು. ಒಲಿಂಪಿಕ್ಸ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಮಹಿಳಾ ಫಿಜಿಯೋಥೆರಪಿಸ್ಟ್‌ನ್ನು ನೇಮಕ ಮಾಡಬೇಕಾಗಿತ್ತು’’ ಎಂದು ಇಸ್ತಾಂಬುಲ್‌ನಲ್ಲಿ ನಡೆದಿದ್ದ ವಿಶ್ವ ಅರ್ಹತಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ವಿನೇಶ್ ಹೇಳಿದ್ದಾರೆ.

 ರಿಯೋಗೆ ತೆರಳಲಿರುವ ಕುಸ್ತಿ ತಂಡದಲ್ಲಿ ಮಹಿಳಾ ಫಿಸಿಯೋರನ್ನು ನೇಮಕ ಮಾಡುವಂತೆ ಭಾರತದ ಕುಸ್ತಿ ಫೆಡರೇಶನ್ ಸಾಯ್ ಹಾಗೂ ಕೇಂದ್ರ ಕ್ರೀಡಾಸಚಿವಾಲಯಕ್ಕೆ ಪತ್ರ ಬರೆದಿದೆ. ಫೆಡರೇಶನ್ ಸಾಯ್ ಅಥವಾ ಸಚಿವಾಲಯದ ನಿರ್ಧಾರವನ್ನು ನಿರೀಕ್ಷಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News