ಟರ್ಕಿ: ಪ್ರಜಾಪ್ರಭುತ್ವದ ಪರವಾಗಿ ನಿಲ್ಲಿ ಎರ್ದೊಗಾನ್‌ರಿಂದ ಜನರಿಗೆ ಮೊಬೈಲ್ ಸಂದೇಶ
ಅಂಕಾರ, ಜು. 16: ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ದೊಗಾನ್ ಶನಿವಾರ ತನ್ನ ದೇಶದ ಪ್ರಜೆಗಳ ಮೊಬೈಲ್‌ಗಳಿಗೆ ಸಂದೇಶವೊಂದನ್ನು ಕಳುಹಿಸಿ, ಪ್ರಜಾಪ್ರಭುತ್ವ ಮತ್ತು ಶಾಂತಿಯ ಪರವಾಗಿ ನಿಲ್ಲುವಂತೆ ಕರೆ ನೀಡಿದ್ದಾರೆ.
‘‘ಆರ್‌ಟಿ ಎರ್ದೊಗಾನ್’’ರಿಂದ ಬಂದ ಮೊಬೈಲ್ ಸಂದೇಶದಲ್ಲಿ ರಿಸೆಪ್ ತಯ್ಯಿಪ್ ಎರ್ದೊಗಾನ್‌ರ ಪೂರ್ಣ ಹೆಸರಿನ ಸಹಿಯಿದೆ.
ಸ್ವಲ್ಪವೇ ಸೈನಿಕರ ವಿರುದ್ಧ ಬೀದಿಗಿಳಿಯುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.
‘‘ಇದಕ್ಕೆ ಅವರು ಭಾರೀ ಬೆಲೆಯನ್ನು ತೆರುತ್ತಾರೆ’’ ಎಂದು ಎರ್ದೊಗಾನ್ ಎಚ್ಚರಿಸಿದರು.
‘‘ಬಂಡಾಯ ದೇವರು ನಮಗೆ ನೀಡಿದ ಕಾಣಿಕೆಯಾಗಿದೆ. ಯಾಕೆಂದರೆ, ಇದು ನಮ್ಮ ಸೇನೆಯನ್ನು ಶುದ್ಧೀಕರಿಸಲು ನಮಗೆ ಅವಕಾಶ ನೀಡಿದೆ’’ ಎಂದರು.
ಬಳಿಕ, ಟ್ವಿಟರ್‌ನಲ್ಲಿ ಎಚ್ಚರಿಕೆಯೊಂದನ್ನು ನೀಡಿದ ಅವರು, ಇನ್ನೊಂದು ಕ್ಷಿಪ್ರಕ್ರಾಂತಿ ಯಾವುದೇ ಕ್ಷಣದಲ್ಲೂ ಸಂಭವಿಸಬಹುದು ಎಂದರು.
ಬಂಡುಕೋರ ಸೈನಿಕರು ಒತ್ತೆಯಾಳಾಗಿ ಇರಿಸಿದ್ದ ಸೇನಾ ಮುಖ್ಯಸ್ಥರನ್ನು ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕ್ಷಿಪ್ರಕ್ರಾಂತಿ ವಿಫಲವಾದರೂ, ನ್ಯಾಟೊ ಸದಸ್ಯ ದೇಶ ಟರ್ಕಿಯಲ್ಲಿ ಅದು ಸಾಕಷ್ಟು ಅಸ್ಥಿರತೆಯನ್ನು ಉಂಟು ಮಾಡಬಹುದಾಗಿದೆ. ಐರೋಪ್ಯ ಒಕ್ಕೂಟ ಮತ್ತು ಸಿರಿಯದ ನಡುವೆ ಇರುವ ಟರ್ಕಿಯ ನಗರಗಳನ್ನು ಐಸಿಸ್ ಭಯೋತ್ಪಾದಕರು ಗುರಿಯಾಗಿಸುತ್ತಿದ್ದಾರೆ ಹಾಗೂ ಕುರ್ದಿಶ್ ಪ್ರತ್ಯೇಕತಾವಾದಿಗಳ ವಿರುದ್ಧವೂ ಸರಕಾರ ಹೋರಾಡುತ್ತಿದೆ.
ವಿಹಾರದಲ್ಲಿದ್ದ ಎರ್ದೊಗಾನ್
ಕ್ಷಿಪ್ರಕ್ರಾಂತಿ ಆರಂಭಗೊಂಡಾಗ ಎರ್ದೊಗಾನ್ ದೇಶದ ನೈರುತ್ಯ ಕರಾವಳಿಯಲ್ಲಿ ಪ್ರವಾಸದಲ್ಲಿದ್ದರು. ಶನಿವಾರ ಮುಂಜಾನೆಯ ಮೊದಲು ಅವರು ಇಸ್ತಾಂಬುಲ್ ತಲುಪಿದರು. ಅಟಾತುರ್ಕ್ ವಿಮಾನ ನಿಲ್ದಾಣದ ಹೊರಗೆ ಅವರು ಇರುವುದನ್ನು ಟಿವಿಯಲ್ಲಿ ತೋರಿಸಲಾಯಿತು.
ಬಳಿಕ, ವಿಮಾನ ನಿಲ್ದಾಣದಲ್ಲಿ ಸಾವಿರಾರು ಧ್ವಜಧಾರಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಎರ್ದೊಗಾನ್, ದೇಶದ ಮೇಲೆ ಸರಕಾರ ನಿಯಂತ್ರಣ ಹೊಂದಿದೆ ಎಂದು ಹೇಳಿದರು.
ರಿಸಾರ್ಟ್ ಪಟ್ಟಣ ಮಾರ್ಮರಿಸ್‌ನಲ್ಲಿ ತನ್ನನ್ನು ಹತ್ಯೆ ಮಾಡಲು ಸಂಚುಕೋರರು ಸಂಚು ರೂಪಿಸಿದ್ದರು ಎಂದು ಅವರು ಆರೋಪಿಸಿದರು.