ಕೆರ್ರಿ ಹೋಪ್ ಎದುರು ವಿಜೇತ ವಿಜೇಂದರ್
ಹೊಸದಿಲ್ಲಿ, ಜು.17: ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದ್ರ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಹೊಸ ಎತ್ತರಕ್ಕೆ ಏರಿದ್ದು, ಡಬ್ಲ್ಯುಬಿಸಿ ಯೂರೋಪಿಯನ್ ಚಾಂಪಿಯನ್ ಕೆರ್ರಿ ಹೋಪ್ ಅವರನ್ನು ಮಣಿಸಿ ಡಬ್ಲ್ಯುಬಿಒ ಏಷ್ಯಾ- ಪೆಸಿಫಿಕ್ ಸೂಪರ್ ಮಿಡ್ಲ್ವೆಯಿಟ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
30 ವರ್ಷದ ಭಾರತೀಯ ಬಾಕ್ಸರ್, ತಮಗಿಂತ ನಾಲ್ಕು ವರ್ಷ ಹಿರಿಯರಾದ ಕೆರ್ರಿಯವರನ್ನು ಮಣಿಸಲು ಎಲ್ಲ 10 ಸುತ್ತುಗಳಲ್ಲಿ ಹೋರಾಡಬೇಕಾಯಿತು. ವೇಲ್ಷ್ ಸಂಜಾತ ಆಸ್ಟ್ರೇಲಿಯನ್ ಹೋಪ್ ಅವರ ವಿರುದ್ಧ ಜಯ ಸಾಧಿಸುವ ಮೂಲಕ ವೃತ್ತಿಪರ ಪಟುವಾಗಿ ಸತತ ಏಳನೇ ಜಯ ದಾಖಲಿಸಿದರು.
ವೃತ್ತಿಪರ ಪಂದ್ಯವೊಂದರಲ್ಲಿ ಅತಿ ಹೆಚ್ಚು ವೇಳೆಯನ್ನು ರಿಂಗ್ ನಲ್ಲಿ ಕಳೆದ ವಿಜೇಂದರ್, ಆರು ಪಂದ್ಯಗಳನ್ನು ನಾಕೌಟ್ ನಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಅಂಕಗಳ ಆಧಾರದಲ್ಲಿ ಜಯ ಸಾಧಿಸಿದರು. ಹರ್ಯಾಣ ಮೂಲದ ವಿಜೇಂದರ್ 98-92, 98-92 ಹಾಗೂ 100-90 ಅಂಕಗಳಿಂದ ತೀರ್ಪುಗಾರರ ಒಮ್ಮತದ ನಿರ್ಧಾರದ ಗೆಲುವು ಸಾಧಿಸಿದರು.
ಅಮೆಚೂರ್ ವಿಭಾಗದಲ್ಲಿ ಭಾರತದ ಪರವಾಗಿ ಮೊದಲ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗಳಿಸಿದ್ದರು. 10 ಸುತ್ತುಗಳ ಹೋರಾಟದಲ್ಲಿ ಎಲ್ಲೂ ಹಿನ್ನಡೆ ಕಾಣದ ವಿಜೇಂದರ್, ತವರಿನ ಪ್ರೇಕ್ಷಕರ ಪ್ರಚಂಡ ಕರತಾಡನ ಹಾಗೂ ಬೆಂಬಲದೊಂದಿಗೆ ಅಪೂರ್ವ ಸಾಧನೆ ಮಾಡಿದರು.