×
Ad

ಭಾರತ-ವಿಂಡೀಸ್ ಅಧ್ಯಕ್ಷರ ಇಲೆವೆನ್ ಅಭ್ಯಾಸ ಪಂದ್ಯ ಡ್ರಾ

Update: 2016-07-17 10:09 IST

ಸೈಂಟ್‌ಕಿಟ್ಸ್, ಜು.17: ಭಾರತ ಹಾಗೂ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಇಲೆವೆನ್ ನಡುವಿನ ತ್ರಿದಿನ ಅಭ್ಯಾಸ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಬೌಲರ್‌ಗಳ ಪೈಕಿ ಆಫ್-ಸ್ಪಿನ್ನರ್ ಆರ್. ಅಶ್ವಿನ್ ಹೊರತುಪಡಿಸಿ ಉಳಿದವರು ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.

 ಮೂರನೆ ದಿನದಾಟವಾದ ಶನಿವಾರ 1 ವಿಕೆಟ್ ನಷ್ಟಕ್ಕೆ 26 ರನ್‌ನಿಂದ ಎರಡನೆ ಇನಿಂಗ್ಸ್ ಆರಂಭಿಸಿದ ವಿಂಡೀಸ್ 86 ಓವರ್‌ಗಳಲ್ಲಿ 6 ವಿಕೆಟ್‌ನಷ್ಟಕ್ಕೆ 223 ರನ್ ಗಳಿಸಿದೆ. ಅಂತಿಮ ದಿನದ ಪಂದ್ಯದಲ್ಲಿ ಬೌನ್ಸ್ ಹಾಗೂ ಟರ್ನ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗೆ ಸವಾಲಾದ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್(3-59) ಎರಡು ವಿಕೆಟ್ ಪಡೆದು ಮಿಂಚಿದರು. ಶಾರ್ದೂಲ್ ಠಾಕೂರ್(0/26) ಹಾಗೂ ರವೀಂದ್ರ ಜಡೇಜ(1-42) ಬೆಳಗ್ಗಿನ ಅವಧಿಯಲ್ಲಿ ಬೌಲಿಂಗ್ ದಾಳಿ ಆರಂಭಿಸಿದರು.

ಮುಂಬೈ ವೇಗಿ ಠಾಕೂರ್ ಲೈನ್ ಹಾಗೂ ಲೆಂಗ್ತ್ ಬೌಲಿಂಗ್ ಮೂಲಕ ಎದುರಾಳಿ ದಾಂಡಿಗರನ್ನು ಕಾಡಿದರು. ಆದರೆ, ಯಾವುದೇ ಯಶಸ್ಸು ಕಾಣಲಿಲ್ಲ. ವಿಂಡೀಸ್ ಜಾನ್ ಕ್ಯಾಂಪ್‌ಬೆಲ್(31) ವಿಕೆಟ್‌ನ್ನು ಬೇಗನೆ ಕಳೆದುಕೊಂಡು ಆತಂಕ ಎದುರಿಸಿತ್ತು. ಜಡೇಜ ಅವರು ಕ್ಯಾಂಪ್‌ಬೆಲ್ ವಿಕೆಟ್ ಪಡೆದರು.

ಜೆರ್ಮೈನ್ ಬ್ಲಾಕ್‌ವುಡ್, ವಿಶಾವುಲ್ ಸಿಂಗ್ ಹಾಗೂ ಮಾಂಟ್‌ಸಿನ್ ಹಾಡ್ಜ್ ಎಚ್ಚರಿಕೆಯ ಆಟ ಆಡುವುದರೊಂದಿಗೆ ಪಂದ್ಯವನ್ನು ಡ್ರಾಗೊಳಿಸಿದರು. ಕಳೆದ ಒಂದೂವರೆ ವರ್ಷದಿಂದ ಬ್ಲಾಕ್‌ವುಡ್ ವಿಂಡೀಸ್‌ನ ಖಾಯಂ ಆಟಗಾರ. ಬ್ಲಾಡ್‌ವುಡ್ 51 ರನ್ ಗಳಿಸಿದ್ದರೆ, ಉಳಿದಿಬ್ಬರು ಆಟಗಾರರು ತಲಾ 39 ರನ್ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಜಡೇಜ ಹಾಗೂ ಅಶ್ವಿನ್ ಉತ್ತಮ ದಾಳಿ ಸಂಘಟಿಸಿ ವಿಂಡೀಸ್‌ನ್ನು 180 ರನ್‌ಗೆ ಆಲೌಟ್ ಮಾಡಿದ್ದರು. ರಾಹುಲ್, ಕೊಹ್ಲಿ ಹಾಗೂ ಜಡೇಜ ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 364 ರನ್ ಗಳಿಸಿ 184 ರನ್ ಮುನ್ನಡೆ ಪಡೆದಿತ್ತು.

ಭಾರತ-ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜು.21 ರಂದು ಆ್ಯಂಟಿಗುವಾದಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News