×
Ad

ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಪಾಕ್‌ಗೆ ಜಯ

Update: 2016-07-17 23:07 IST

ಲಾರ್ಡ್ಸ್, ಜು.17: ವೇಗದ ಬೌಲರ್‌ಗಳಾದ ರಾಹತ್ ಅಲಿ(3-47), ಮುಹಮ್ಮದ್ ಆಮಿರ್(2-39) ಹಾಗೂ ಸ್ಪಿನ್ನರ್ ಯಾಸಿರ್ ಷಾ(4-69) ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 75 ರನ್‌ಗಳ ಅಂತರದಿಂದ ಸೋತಿದೆ.

ಐತಿಹಾಸಿಕ ಲಾರ್ಡ್ಸ್ ಗ್ರೌಂಡ್‌ನಲ್ಲಿ ಗೆಲುವು ಸಾಧಿಸಿರುವ ಪಾಕ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕ್ರಿಸ್ ವೋಕ್ಸ್(5-32) ಹಾಗೂ ಮೊಯಿನ್ ಅಲಿ(2-49) ಕರಾರುವಾಕ್ ದಾಳಿಯ ಹೊರತಾಗಿಯೂ ಪಾಕ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ಗೆಲುವಿಗೆ 283 ರನ್ ಗುರಿ ನೀಡಿತ್ತು.

 ಗೆಲ್ಲಲು ಕಠಿಣ ಸವಾಲು ಪಡೆದ ಇಂಗ್ಲೆಂಡ್ ತಂಡ 207 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಆಂಗ್ಲರು ಆರಂಭದಲ್ಲೇ ಎಡವಿದರು. ನಾಯಕ ಅಲೆಸ್ಟೈರ್ ಕುಕ್(8), ಹೇಲ್ಸ್(16) ಹಾಗೂ ಜೋ ರೂಟ್(09)ತಂಡದ ಮೊತ್ತ 47 ರನ್ ತಲುಪುವಷ್ಟರಲ್ಲಿ ಪೆವಿಲಿಯನ್ ಸೇರಿದರು. ರಾಹತ್ ಅಲಿ(3-36) ಅತ್ಯುತ್ತಮ ಬೌಲಿಂಗ್‌ನ ಮೂಲಕ ಆಂಗ್ಲರಿಗೆ ಆರಂಭಿಕ ಆಘಾತ ನೀಡಿದರು.

ಆಗ ನಾಲ್ಕನೆ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿದ ವಿನ್ಸಿ(42 ರನ್) ಹಾಗೂ ಬ್ಯಾಲನ್ಸ್(43) ತಂಡವನ್ನು ಆಧರಿಸಿದರು. ಬೈರ್‌ಸ್ಟೋ(48) ಹಾಗೂ ವೋಕ್ಸ್(23) ಒಂದಷ್ಟು ಹೋರಾಟ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಸ್ಪಿನ್ನರ್ ಯಾಸಿರ್ ಎರಡನೆ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ದಾಂಡಿಗರಿಗೆ ದುಸ್ವಪ್ನರಾದರು. ಆರಂಭದಲ್ಲಿ ರಾಹತ್ ಅಲಿ ಹಾಗೂ ಅಂತ್ಯದಲ್ಲಿ ಆಮಿರ್ ಆಂಗ್ಲರಿಗೆ ಸವಾಲಾದರು. ಈ ಮೂಲಕ ತಂಡಕ್ಕೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.

 ಇದಕ್ಕೆ ಮೊದಲು 4ನೆ ದಿನದಾಟವಾದ ರವಿವಾರ 8 ವಿಕೆಟ್‌ನಷ್ಟಕ್ಕೆ 214 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ತಂಡ ಕೇವಲ 1 ಗಳಿಸುವಷ್ಟರಲ್ಲಿ ಉಳಿದೆರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಯಾಸಿರ್ ಷಾ(30) ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಬ್ರಾಡ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಮುಹಮ್ಮದ್ ಆಮಿರ್ (1) ವಿಕೆಟ್ ಉಡಾಯಿಸಿದ ಬ್ರಾಡ್ ಪಾಕ್‌ನ ಇನಿಂಗ್ಸ್‌ಗೆ ತೆರೆ ಎಳೆದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಪ್ರಥಮ ಇನಿಂಗ್ಸ್: 339 ರನ್‌ಗೆ ಆಲೌಟ್

ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 272 ರನ್‌ಗೆ ಆಲೌಟ್

ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 79.1 ಓವರ್‌ಗಳಲ್ಲಿ 215 ರನ್‌ಗೆ ಆಲೌಟ್

ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್:

75.5 ಓವರ್‌ಗಳಲ್ಲಿ 207 ರನ್‌ಗೆ ಆಲೌಟ್

(ಬೈರ್‌ಸ್ಟೋ 48, ಬ್ಯಾಲನ್ಸ್ 43, ವಿನ್ಸಿ 42, ಯಾಸಿರ್ ಷಾ 4-69, ರಾಹತ್ ಅಲಿ 3-47, ಆಮಿರ್ 2-39)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News