×
Ad

ಬ್ರಿಟನ್, ಕ್ರೊಯೇಷಿಯ, ಅರ್ಜೆಂಟೀನ, ಫ್ರಾನ್ಸ್ ಸೆಮಿಫೈನಲ್‌ಗೆ

Update: 2016-07-18 23:46 IST

  ಲಂಡನ್, ಜು.18: ಹಾಲಿ ಚಾಂಪಿಯನ್ ಗ್ರೇಟ್ ಬ್ರಿಟನ್, ಕ್ರೊಯೇಷಿಯ, ಅರ್ಜೆಂಟೀನ ಹಾಗೂ ಫ್ರಾನ್ಸ್ ತಂಡಗಳು ಡೇವಿಸ್ ಕಪ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿವೆ. ಗ್ರೇಟ್ ಬ್ರಿಟನ್ ತಂಡ ಸರ್ಬಿಯ ವಿರುದ್ಧ 3-2 ಅಂತರದಿಂದ ಗೆಲುವು ಸಾಧಿಸುವ ಮೂಲಕ ಡೇವಿಸ್ ಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದೆ.

ಬ್ರಿಟನ್ ತಂಡ ಸೆಮಿಫೈನಲ್‌ನಲ್ಲಿ ಅರ್ಜೆಂಟೀನವನ್ನು ಎದುರಿಸಲಿದೆ. ಇಟಲಿ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವನ್ನು 3-1 ಅಂತರದಿಂದ ಗೆದ್ದುಕೊಂಡಿರುವ ಅರ್ಜೆಂಟೀನ ತಂಡ 14 ವರ್ಷಗಳಲ್ಲಿ 11ನೆ ಬಾರಿ ಸೆಮಿಫೈನಲ್‌ಗೆ ತಲುಪಿದೆ.

ಬ್ರಿಟನ್ ವಿರುದ್ಧ 3-1 ದಾಖಲೆ ಹೊಂದಿರುವ ಅರ್ಜೆಂಟೀನ ತಂಡ ಸೆ.16 ರಿಂ 18ರ ತನಕ ಸೆಮಿ ಫೈನಲ್ ಪಂದ್ಯವನ್ನು ಆಡಲಿದೆ.

ಅಮೆರಿಕದ ವಿರುದ್ಧ 3-2 ಅಂತರದಿಂದ ಗೆಲುವು ಸಾಧಿಸಿರುವ ಕ್ರೊಯೇಷಿಯ ತಂಡ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದೆ. ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

ಕ್ರೊಯೇಷಿಯ 2009ರ ಬಳಿಕ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿದೆ. 2005ರಲ್ಲಿ ಒಂದು ಬಾರಿ ಮಾತ್ರ ಡೇವಿಸ್‌ಕಪ್‌ನ್ನು ಗೆದ್ದುಕೊಂಡಿದೆ. ಡೇವಿಸ್ ಕಪ್‌ನಲ್ಲಿ 2-0 ಮುನ್ನಡೆಯಲ್ಲಿದ್ದ ಅಮೆರಿಕ ನಾಲ್ಕನೆ ಬಾರಿ ಸೆಮಿಫೈನಲ್ ತಲುಪಲು ವಿಫಲವಾಗಿದೆ.

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಜೋ-ವಿಲ್ಫ್ರೆಡ್ ಸೋಂಗ ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯವನ್ನು ಜಯಿಸಿ ಫ್ರಾನ್ಸ್ ತಂಡ ಆತಿಥೇಯ ಝೆಕ್ ಗಣರಾಜ್ಯದ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಲು ನೆರವಾದರು.

 ಫ್ರಾನ್ಸ್‌ನ ನೀಸ್ ನಗರದಲ್ಲಿ ಉಗ್ರಗಾಮಿ ದಾಳಿ ನಡೆದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬಿಗಿ ಬಂದೋಬಸ್ತ್‌ನ ನಡುವೆ ಸೋಂಗ ಎದುರಾಳಿ ವೆಸ್ಲೆ ವಿರುದ್ಧ 4-6, 7-6(3), 6-4, 7-5 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಫ್ರಾನ್ಸ್ ತಂಡ ಮೂರು ವರ್ಷಗಳಲ್ಲಿ ಎರಡನೆ ಬಾರಿ ಡೇವಿಸ್‌ಕಪ್‌ನಲ್ಲಿ ಸೆಮಿ ಫೈನಲ್ ತಲುಪಲು ನೆರವಾದರು.

ಫ್ರಾನ್ಸ್ 9 ಬಾರಿ ಡೇವಿಸ್‌ಕಪ್ ಪ್ರಶಸ್ತಿ ಜಯಿಸಿದೆ. ಆದರೆ, 2001ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಫ್ರಾನ್ಸ್ ತಂಡ ಕ್ರೊಯೇಷಿಯ ವಿರುದ್ಧ ಸೆಮಿ ಫೈನಲ್ ಪಂದ್ಯ ಆಡಲು ಸಜ್ಜಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News