ಶರದ್ ಪವಾರ್, ಶ್ರೀನಿವಾಸನ್, ನಿರಂಜನ್ ಅಧಿಕಾರಕ್ಕೆ ಕುತ್ತು
ಹೊಸದಿಲ್ಲಿ, ಜು.18: ಬಿಸಿಸಿಐ ಆಡಳಿತ ಮಂಡಳಿಯ ಪದಾಧಿಕಾರಿಗಳ ವಯಸ್ಸಿನ ಮಿತಿಯನ್ನು 70 ವರ್ಷಕ್ಕೆ ನಿಗದಿಪಡಿಸುವ ಲೋಧಾ ಸಮಿತಿಯ ಶಿಫಾರಸನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಹಿರಿಯ ಆಡಳಿತಾಧಿಕಾರಿಗಳಾಗಿರುವ ಶರದ್ ಪವಾರ್, ಎನ್.ಶ್ರೀನಿವಾಸನ್ ಹಾಗೂ ನಿರಂಜನ್ ಶಾ ಸಹಿತ ಇನ್ನಿತರರ ಬಿಸಿಸಿಐನ ನಂಟು ಬಹುತೇಕ ಕೊನೆಗೊಂಡಂತಾಗಿದೆ.
ಆರ್.ಎಂ. ಲೋಧಾ ಸಮಿತಿಯ ಪ್ರಮುಖ ಶಿಫಾರಸಿಗೆ ಸುಪ್ರೀಂಕೋರ್ಟ್ ಅಸ್ತು ಎಂದಿರುವ ಕಾರಣ ಸ್ವಹಿತಾಸಕ್ತಿ ಸಂಘರ್ಷ ಆರೋಪದಿಂದ ಮುಕ್ತವಾಗಲು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್(ಹಿಮಾಚಲ ಪ್ರದೇಶ), ಕಾರ್ಯದರ್ಶಿ ಅಜಯ್ ಶಿರ್ಕೆ(ಮಹಾರಾಷ್ಟ್ರ), ಖಜಾಂಚಿ ಅನಿರುದ್ಧ್ ಚೌಧರಿ(ಹರ್ಯಾಣ), ಜೊತೆ ಕಾರ್ಯದರ್ಶಿ ಅಮಿತಾಭ್ ಚೌಧರಿ(ಜಾರ್ಖಂಡ್) ಸಂಬಂಧಪಟ್ಟ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ತಮ್ಮ ಸ್ಥಾನವನ್ನು ತ್ಯಜಿಸಬೇಕಾಗಿದೆ.
ಸುಪ್ರೀಂಕೋರ್ಟ್ ಬಿಸಿಸಿಐಗೆ ಲೋಧಾ ಸಮಿತಿಯ ಶಿಫಾರಸು ಜಾರಿಗೆ ತರಲು ಆರು ತಿಂಗಳ ಕಾಲ ಕಾಲಾವಕಾಶ ನೀಡಿದೆ.
ಬಿಸಿಸಿಐನ ಮಾಜಿ ಅಧ್ಯಕ್ಷ ಪವಾರ್‌ಗೆ 75 ವರ್ಷ, ತಮಿಳುನಾಡಿನ ಶ್ರೀನಿವಾಸನ್‌ಗೆ 71 ವರ್ಷ ಪ್ರಾಯವಾಗಿದೆ. ಈ ಇಬ್ಬರು ಕ್ರಮವಾಗಿ ಮುಂಬೈ ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
ಬಿಸಿಸಿಐಯ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಖಜಾಂಚಿ ಹಾಗೂ ಉಪಾಧ್ಯಕ್ಷರಾಗಿ ಸುಮಾರು 30 ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ನಿರಂಜನ್ ಶಾಗೆ 72 ವರ್ಷ ವಯಸ್ಸಾಗಿದೆ.
‘‘ಉಚ್ಚ ನ್ಯಾಯಾಲಯದ ತೀರ್ಪಿನಿಂದ ಬೇಸರವಾಗಿದೆ. ಆದರೆ, ನ್ಯಾಯಾಲಯದ ತೀರ್ಪನ್ನು ಗೌರವಿಸುವೆ. ಸುಪ್ರೀಂ ತೀರ್ಪನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಇನ್ನೂ ಕನಿಷ್ಠ 18 ತಿಂಗಳು ಬೇಕಾಗಬಹುದು’’ ಎಂದು ನಿರಂಜನ್ ಶಾ ಹೇಳಿದ್ದಾರೆ.
ಬಿಸಿಸಿಐ ಮೊದಲಿಗೆ ತನ್ನೊಳಗೆ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಿ. ಆಮೇಲೆ ರಾಜ್ಯ ಸಂಸ್ಥೆಗಳಲ್ಲಿ ಜಾರಿಗೆ ತರಬಹುದು ಎಂದು ಶಾ ಸಲಹೆ ನೀಡಿದರು.
ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ಲೋಧಾ ಸಮಿತಿ ಮಾಡಿರುವ ಹೆಚ್ಚಿನೆಲ್ಲಾ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್, ಸಚಿವರು, ಸರಕಾರಿ ಅಧಿಕಾರಿಗಳು ಹಾಗೂ 70 ವರ್ಷ ಮೇಲ್ಪಟ್ಟವರು ಬಿಸಿಸಿಐ ಪದಾಧಿಕಾರಿಯಾಗುವುದನ್ನು ನಿರ್ಬಂಧಿಸಿದೆ. ಬಿಸಿಸಿಐಯನ್ನು ಆರ್‌ಟಿಐ ಕಾಯ್ದೆ ಅಡಿ ತರಬೇಕೇ, ಬೆಟ್ಟಿಂಗ್‌ನ್ನು ಕಾನೂನುಬದ್ದಗೊಳಿಸಬೇಕೇ ಎಂಬುದನ್ನು ಸಂಸತ್‌ನಲ್ಲಿ ನಿರ್ಧರಿಸಬೇಕು ಎಂದು ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ತಿಳಿಸಿದೆ.
ಸುಪ್ರೀ ತೀರ್ಪಿಗೆ ತಲೆಬಾಗುವೆ: ರಾಜೀವ್ ಶುಕ್ಲಾ
ಹೊಸದಿಲ್ಲಿ, ಜು.18: ಕ್ರಿಕೆಟ್ ಮಂಡಳಿಯಲ್ಲಿ ಸುಧಾರಣೆ ಮಾಡಬೇಕೆಂಬ ಸುಪ್ರೀಂಕೋರ್ಟ್‌ನ ತೀರ್ಪನ್ನು ನಾವು ಗೌರವಿಸುತ್ತೇವೆ. ಲೋಧಾ ಸಮಿತಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಕ್ರಿಕೆಟ್ ಮಂಡಳಿ ಕಾರ್ಯಪ್ರವೃತ್ತವಾಗಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಹಾಗೂ ಐಪಿಎಲ್ ಚೇರ್‌ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ.
ನಾವು ಸುಪ್ರೀಂ ನಿರ್ಧಾರವನ್ನು ಗೌರವಿಸುತ್ತೇವೆ. ಲೋಧಾ ಸಮಿತಿಯ ಶಿಫಾರಸುಗಳನ್ನು ಹೇಗೆ ಜಾರಿಗೆ ತರಬಹುದು ಎಂಬ ಕುರಿತು ಯೋಚಿಲಿದ್ದೇವೆ ಎಂದು ಸುದ್ದಿವಾಹಿನಿಗಳಿಗೆ ಶುಕ್ಲಾ ತಿಳಿಸಿದ್ದಾರೆ.