×
Ad

ಯಮನ್ ಸೇನಾ ಠಾಣೆಗಳ ಮೇಲೆ ಆತ್ಮಹತ್ಯಾ ದಾಳಿ

Update: 2016-07-19 23:52 IST

ಏಡನ್, ಜು. 19: ಯಮನ್‌ನಲ್ಲಿ ಸೋಮವಾರ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಸ್ಫೋಟಕಗಳಿಂದ ತುಂಬಿರುವ ವಾಹನಗಳನ್ನು ಸರಕಾರಿ ನಿಯಂತ್ರಣದ ಬಂದರು ನಗರ ಮುಕಲ್ಲದ ಸಮೀಪವಿರುವ ಎರಡು ಸೇನಾ ತಪಾಸಣಾ ಠಾಣೆಗಳ ಮೇಲೆ ನುಗ್ಗಿಸಲು ಯತ್ನಿಸಿದಾಗ ಕನಿಷ್ಠ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೇನೆ ಮತ್ತು ವೈದ್ಯರು ತಿಳಿಸಿದ್ದಾರೆ.

ಯಮನ್ ಅಧ್ಯಕ್ಷ ಮನ್ಸೂರ್ ಹದಿಗೆ ನಿಷ್ಠವಾಗಿರುವ ಪಡೆಗಳು ಯುಎಇ ಪಡೆಗಳ ನೆರವಿನಿಂದ ಎಪ್ರಿಲ್‌ನಲ್ಲಿ ನಗರದಿಂದ ಅಲ್ ಖಾಯಿದ ಭಯೋತ್ಪಾದಕರನ್ನು ಹೊರಗಟ್ಟಿದ ಬಳಿಕ ಹಿಂಸಾಚಾರದಲ್ಲಿ ಹೆಚ್ಚಳವಾಗಿದೆ.

ಭಯೋತ್ಪಾದಕರು ಸ್ಫೋಟಕಗಳಿಂದ ತುಂಬಿದ್ದ ಒಂದು ಬಸ್ಸನ್ನು ಅಲ್-ಬುರುಮ್‌ನಲ್ಲಿರುವ ತಪಾಸಣಾ ಠಾಣೆಯಲ್ಲಿ ಹಾಗೂ ಸ್ಫೋಟಕಗಳಿಂದ ತುಂಬಿರುವ ಕಾರನ್ನು ಅಲ್-ಘಾಬರ್‌ನಲ್ಲಿ ಸ್ಫೋಟಗಳಿಗಾಗಿ ಬಳಸಿದರು ಎಂದು ಯಮನ್ ಸೇನೆಯ ಸೆಕಂಡ್ ಮಿಲಿಟರಿ ಕಮಾಂಡ್ ತಿಳಿಸಿದೆ.

‘‘ತನಿಖಾ ಠಾಣೆಗಳಲ್ಲಿರುವ ಪಡೆಗಳು ವಾಹನಗಳನ್ನು ತಡೆಯುವಲ್ಲಿ ಯಶಸ್ವಿಯಾದವು’’ ಎಂದು ಸೇನೆ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News