ಸ್ಪೇನ್ ಫುಟ್ಬಾಲ್ ತಂಡಕ್ಕೆ ಜೂಲನ್ ಲೊಪೆಟಿಗಿ ಕೋಚ್
ಮ್ಯಾಡ್ರಿಡ್, ಜು.21: ವಿಶ್ವಕಪ್ ಹಾಗೂ ಯುರೋಪಿಯನ್ ಚಾಂಪಿಯನ್‌ಶಿಪ್ ವಿನ್ನರ್ ಸ್ಪೇನ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ವಿನ್ಸೆಂಟ್ ಡಿ ಬಾಸ್ಕ್ ಉತ್ತರಾಧಿಕಾರಿಯಾಗಿ ಮಾಜಿ ಪೊರ್ಟೊ ಬಾಸ್ ಜೂಲನ್ ಲೊಪೆಟಿಗಿ ಗುರುವಾರ ಆಯ್ಕೆಯಾಗಿದ್ದಾರೆ.
ರಾಯಲ್ ಸ್ಪೇನೀಶ್ ಫುಟ್ಬಾಲ್ ಫೆಡರೇಶನ್ ರಾಷ್ಟ್ರೀಯ ತಂಡದ ಹೊಸ ಮ್ಯಾನೇಜರ್ ಆಗಿ ಜೂಲನ್ ಲೊಪೆಟಿಗಿ ಅವರನ್ನು ಆಯ್ಕೆ ಮಾಡಿದೆ ಎಂದು ಸ್ಪೇನ್ ತಂಡ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಮಾಜಿ ಗೋಲ್‌ಕೀಪರ್ ಲೊಪೆಟಿಗಿ 2002ರಲ್ಲಿ ವೃತ್ತಿಪರ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು. ಸ್ಪೇನ್‌ನ ದ್ವಿತೀಯ ದರ್ಜೆಯ ತಂಡ ರಾಯೊ ವಾಲ್ಲೆಕಾನೊ ತಂಡದ ಕೋಚ್ ಆಗಿಯೂ ಸೇವೆಸಲ್ಲಿಸಿದ್ದರು.
49ರ ಹರೆಯದ ಲೊಪೆಟಿಗಿ ಅಂಡರ್-19, ಅಂಡರ್-20 ಹಾಗೂ ಅಂಡರ್-21 ತಂಡಗಳ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಪೊರ್ಟೊ ಫುಟ್ಬಾಲ್ ಕ್ಲಬ್‌ನಲ್ಲಿ ಈ ವರ್ಷದ ಜನವರಿಯ ತನಕ ಕೋಚ್ ಆಗಿದ್ದರು.
ಈ ವರ್ಷದ ಯುರೋ ಕಪ್‌ನ ಅಂತಿಮ 16ರ ಸುತ್ತಿನಲ್ಲಿ ಸ್ಪೇನ್ ತಂಡ ಇಟಲಿ ವಿರುದ್ಧ ಸೋತ ಹಿನ್ನೆಲೆಯಲ್ಲಿ ರಿಯಲ್ ಮ್ಯಾಡ್ರಿಡ್‌ನ ಮಾಜಿ ಬಾಸ್ ಡೆಲ್ ಬಾಸ್ಕ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಡೆಲ್‌ಬಾಸ್ಕ್ ಸ್ಪೇನ್ ತಂಡ 2010ರ ವಿಶ್ವಕಪ್ ಹಾಗೂ 2012ರ ಯುರೋ ಕಪ್ ಜಯಿಸುವಲ್ಲಿ ಮಾರ್ಗದರ್ಶನ ನೀಡಿದ್ದರು.