ಸುಧಾರಣೆಗಳ ಅನುಷ್ಠಾನಕ್ಕಾಗಿ ಆ.9ಕ್ಕೆ ಬಿಸಿಸಿಐ-ಲೋಧಾ ಸಮಿತಿ ಸಭೆ
ಹೊಸದಿಲ್ಲಿ, ಜು.22: ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆಗೆ ತನ್ನ ಮುಂದೆ ಖುದ್ದು ಹಾಜರಾಗಿ, ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸುವಂತೆ ಲೋಧಾ ಸಮಿತಿ ಸೂಚಿಸಿದೆ ಎನ್ನಲಾಗಿದೆ.
ಲೋಧಾ ಸಮಿತಿ ಆಗಸ್ಟ್ 9 ರಂದು ದಿಲ್ಲಿಯಲ್ಲಿ ಸಭೆ ನಡೆಸುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಬಿಸಿಸಿಐನಲ್ಲಿ ತರಬೇಕಾಗಿರುವ ಸುಧಾರಣೆಗಳ ಬಗ್ಗೆ ಚರ್ಚಿಸಲಿದೆ. ಸುಧಾರಣೆಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬ ಬಗ್ಗೆ ಬಿಸಿಸಿಐಗೆ ಮನವರಿಕೆ ಮಾಡಲು ಲೋಧಾ ಸಮಿತಿ ನೀಲಿ ನಕ್ಷೆಯನ್ನು ಸಿದ್ಧಪಡಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಲೋಧಾ ಸಮಿತಿಯ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರಲು ಬಿಸಿಸಿಐಗೆ ಸುಪ್ರೀಂಕೋರ್ಟ್ ಆರು ತಿಂಗಳ ಕಾಲಾವಕಾಶ ನೀಡಿದೆ.
ಮುಂದಿನ ನಿರ್ದೇಶನದ ತನಕ ಚುನಾವಣೆ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಬಿಸಿಸಿಐಗೆ ಲೋಧಾ ಸಮಿತಿ ಸೂಚಿಸಲಿದೆ. ಬಿಸಿಸಿಐನ ವಾರ್ಷಿಕ ಮಹಾಸಭೆ(ಎಜಿಎಂ) ಸೆಪ್ಟಂಬರ್ ಅಂತ್ಯಕ್ಕೆ ಮುಂದೂಡಲ್ಪಡುವ ಸಾಧ್ಯತೆಯಿದೆ. ಇದೇ ವೇಳೆ, ಲೋಧಾ ಸಮಿತಿಯ ಸುಧಾರಣೆಗಳನ್ನು ಜಾರಿಗೆ ತರುವ ಸಂಬಂಧ ಚರ್ಚೆ ನಡೆಸಲು ಬಿಸಿಸಿಐ ವಿಶೇಷ ಸಾಮಾನ್ಯ ಸಭೆ(ಎಸ್‌ಜಿಎಂ) ಕರೆದಿದೆ.