ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ ಆಳ್ವಾಸ್ ವಿದ್ಯಾರ್ಥಿ ಧರುಣ್ ಅಯ್ಯಸ್ವಾಮಿ
ಮೂಡುಬಿದಿರೆ, ಜು.24: ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಆಳ್ವಾಸ್ ಕಾಲೇಜಿನ ಕ್ರೀಡಾಪಟು ಧರುಣ್ ಅಯ್ಯ ಸ್ವಾಮಿ ಅರ್ಹತೆಯನ್ನು ಪಡೆದಿದ್ದಾರೆ.
4x400 ಮೀಟರ್ ರಿಲೇಯಲ್ಲಿ ಸ್ಪರ್ಧಿಸಲು ಭಾರತ ತಂಡವನ್ನು ಪ್ರತಿನಿಧಿಸಲಿರುವ ಆರು ಆಟಗಾರರ ಪೈಕಿ ಧರುಣ್ ಕೂಡ ಒಬ್ಬರು. ಕಳೆದ ವರ್ಷದ ಅಖಿಲ ಭಾರತ ಅಥ್ಲೆಟಿಕ್ಸ್‌ನ 400 ಮೀಟರ್ ಓಟದಲ್ಲಿ ಚಿನ್ನ, ಹರ್ಡಲ್ಸ್‌ನಲ್ಲಿ ಕೂಟ ದಾಖಲೆ ಮತ್ತು ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. 400 ಮೀಟರ್ ಓಟವನ್ನು 46.31ಸೆಕೆಂಡ್ಸ್‌ನಲ್ಲಿ ಗುರಿಮುಟ್ಟಿರುವುದು ಧಾರುಣ್ ಅವರ ಜೀವನ ಶ್ರೇಷ್ಠ ಸಾಧನೆಯಾಗಿದೆ.
ಮೂಲತ ತಮಿಳ್ನಾಡಿನವರಾದ ಈತ ಪ್ರಸ್ತುತ ಆಳ್ವಾಸ್‌ನ ಬಿಎಚ್‌ಆರ್‌ಡಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, 20 ವರ್ಷವ ಪ್ರಾಯದ ಈತ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆಟಗಾರರ ಪೈಕಿ ಅತ್ಯಂತ ಕಿರಿಯರಾಗಿದ್ದಾರೆ.
ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಧರುಣ್‌ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಒಂದು ಲಕ್ಷ ರೂ. ಪುರಸ್ಕಾರವನ್ನು ನೀಡಲಾಗಿದೆ. ಅದಲ್ಲದೆ ಆತನ ತರಬೇತಿಗೆ ಪ್ರತಿ ತಿಂಗಳು ಸುಮಾರು 20 ಸಾವಿರ ರೂ.ನ್ನು ಸಂಸ್ಥೆ ಖರ್ಚು ಮಾಡುತ್ತಿದೆ. ಧರುಣ್ ಜೊತೆಗೆ ಸಂಸ್ಥೆಯ ಪ್ರಾಯೋಜಿತ ವಿದ್ಯಾರ್ಥಿ ಇಂದ್ರಜಿತ್, ಹಳೆ ವಿದ್ಯಾರ್ಥಿಗಳಾದ ಪೂವಮ್ಮ ಹಾಗೂ ಅಶ್ವಿನಿ ಅಕ್ಕುಂಜೆ ಕೂಡ ಈ ಬಾರಿಯ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದು ಇವರ ಉತ್ತಮ ನಿರ್ವಹಣೆಯಿಂದ ದೇಶಕ್ಕೆ ಹಾಗೂ ಅಳ್ವಾಸ್ ಸಂಸ್ಥೆಗೆ ಕೀರ್ತಿ ಬರಲಿದೆ ಎಂದು ಡಾ.ಎಂ. ಮೋಹನ ಆಳ್ವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಳ್ವಾಸ್‌ನ ವಿದ್ಯಾರ್ಥಿ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ದೊಡ್ಡ ವಿಚಾರ. ಹೀಗೆ ಕ್ರೀಡಾ ರಂಗದಲ್ಲಿ ಉನ್ನತ ಸಾಧನೆ ಮಾಡುವಂತಾಗಬೇಕು ಎನ್ನುವ ಆಸೆಯಿಂದಲೇ ಆಳ್ವಾಸ್ ತನ್ನ ಕ್ರೀಡಾ ವಿದ್ಯಾರ್ಥಿಗಳಿಗೆ ತರಬೇತಿ, ನೀಡುತ್ತಿದೆ. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಆಳ್ವಾಸ್ ಪ್ರಾಯೋಜಿತ ಸತೀಶ್ ರೈ ಪಾಲ್ಗೊಂಡಿದ್ದರು. ಬಳಿಕ ನಾಲ್ಕು ಮಂದಿ ಆಳ್ವಾಸ್ ಬಳಗದವರಾಗಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ. ಹೊಬಳಿ ಮಟ್ಟದಲ್ಲಿರುವ ಮೂಡುಬಿದಿರೆಯಲ್ಲಿ ಕ್ರೀಡಾ ಸಚಿವರಾಗಿದ್ದಾಗ ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ನೀಡಿದ ಸಿಂಥೆಟಿಕ್ ಟ್ರ್ಯಾಕ್ ಸಹಿತ ಕ್ರೀಡಾ ಸೌಲಭ್ಯಗಳ ಪರಿಣಾಮ ಇದಾಗಿದೆ.
-ಡಾ.ಎಂ. ಮೋಹನ ಆಳ್ವ