ರಿಯೋ ಒಲಿಂಪಿಕ್ಸ್‌ಗೆ ಅಮೆರಿಕದಿಂದ 292 ಮಹಿಳಾ ಅಥ್ಲೀಟ್‌ಗಳು
ಲಾಸ್ ಏಂಜಲೀಸ್, ಜು.24: ಮುಂಬರುವ ಒಲಿಂಪಿಕ್ಸ್‌ನಲ್ಲಿ ಅಮೆರಿಕದಿಂದ ದಾಖಲೆಯ ಸಂಖ್ಯೆಯಲ್ಲಿ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಒಲಿಂಪಿಕ್ಸ್‌ಗೆ ತೆರಳಲಿರುವ ತಂಡದಲ್ಲಿ ಒಟ್ಟು 555 ಮಂದಿ ಅಥ್ಲೀಟ್‌ಗಳು ಇದ್ದಾರೆ. ಈ ಪೈಕಿ ಮಹಿಳಾ ಅಥ್ಲೀಟ್‌ಗಳು 292.
ಅಮೆರಿಕ ಎರಡನೆ ಬಾರಿ ದಾಖಲೆಯ ಸಂಖ್ಯೆಯಲ್ಲಿ ಅಥ್ಲೀಟ್‌ಗಳನ್ನು ಒಲಿಂಪಿಕ್ಸ್‌ಗೆ ಕಳುಹಿಸಿಕೊಡಲಿದೆ. ಈ ತಂಡದಲ್ಲಿ 263 ಪುರುಷ ಅಥ್ಲೀಟ್‌ಗಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಪರ 269 ಮಹಿಳೆಯರು ಮತ್ತು 261 ಪುರುಷ ಅಥ್ಲೀಟ್‌ಗಳು ಭಾಗವಹಿಸಿದ್ದರು. ಅಮೆರಿಕ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನದೊಂದಿಗೆ 46 ಚಿನ್ನ, 28 ಬೆಳ್ಳಿ ಮತ್ತು 29 ಕಂಚು ಸೇರಿದಂತೆ 103 ಪದಕ ಗೆದ್ದುಕೊಂಡಿತ್ತು.
ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಅಮೆರಿಕದ ಒಲಿಂಪಿಕ್ಸ್ ತಂಡದಲ್ಲಿ ಈ ಹಿಂದೆ ಭಾಗವಹಿಸಿದ್ದ 191 ಅಥ್ಲೀಟ್‌ಗಳು ಇದ್ದಾರೆ. ಚಿನ್ನ ಜಯಿಸಿದ 68 ಅಥ್ಲೀಟ್‌ಗಳು ಇದ್ದಾರೆ.
ಅಮೆರಿಕ 27 ಕ್ರೀಡೆಗಳ 244 ವಿಭಾಗಗಳಲ್ಲಿ 306 ಪದಕಗಳಿಗಾಗಿ ಬೇಟೆ ನಡೆಸಲಿದೆ. ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ 191 ಅಥ್ಲೀಟ್‌ಗಳಲ್ಲಿ 6 ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅಥ್ಲೀಟ್‌ಗಳು ಇದ್ದಾರೆ. 7 ಮಂದಿ ಐದು ಬಾರಿ, 19 ಮಂದಿ 4 ಬಾರಿ, 50 ಮಂದಿ 3 ಬಾರಿ ಮತ್ತು 112 ಮಂದಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅಥ್ಲೀಟ್‌ಗಳು ಇದ್ದಾರೆ.
ಚಿನ್ನ ಪದಕ ಜಯಿಸಿರುವ 68 ಅಥ್ಲೀಟ್‌ಗಳಲ್ಲಿ 53 ಮಂದಿ ಇನ್ನೊಮ್ಮೆ ಪದಕ ಜಯಿಸುವ ಪ್ರಯತ್ನ ನಡೆಸಲಿದ್ದಾರೆ. ಈ ಪೈಕಿ 19 ಮಂದಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಕ್ರೀಡಾಪಟುಗಳು.
ಪದಕದ ಬೇಟೆಗೆ ತಯಾರಾಗಿರುವ ಅಮೆರಿಕದ ತಂಡದಲ್ಲಿ ಸ್ವಿಮ್ಮಿಂಗ್ ಗ್ರೇಟ್ ಮೈಕೆಲ್ ಫೆಲ್ಪ್ಸ್ 22 ಪದಕ (18 ಚಿನ್ನ), ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್ ಅಲೈಸನ್ ಫೆಲಿಕ್ಸ್ 6 ಪದಕ (4 ಚಿನ್ನ) ಪ್ರಮುಖ ಆಕರ್ಷಣೆಯಾಗಿದ್ದಾರೆ.ಟೆನಿಸ್‌ನ ಮಹಿಳೆಯರ ಡಬಲ್ಸ್‌ನಲ್ಲಿ ನಾಲ್ಕು ಬಾರಿ ಚಾಂಪಿಯನ್ ವಿಲಿಯಮ್ಸ್ ಸೋದರಿಯರು ಇದ್ದಾರೆ. ಅವರು ಐದನೆ ಬಾರಿ ಪದಕ ಜಯಿಸುವ ಯೋಜನೆಯಲ್ಲಿದ್ದಾರೆ.
ಅಮೆರಿಕದ ಸ್ಪೋರ್ಟ್ಸ್ ಟೀಮ್ ಒಲಿಂಪಿಕ್ಸ್‌ನಲ್ಲಿ ಗಳಿಸಿರುವ ಯಶಸ್ಸನ್ನು ಮುಂದುವರಿಸಲಿದೆ. ಮಹಿಳೆಯರ ಬಾಸ್ಕೆಟ್‌ಬಾಲ್ ತಂಡ ಆರನೆ ಬಾರಿ ಮತ್ತು ಪುರುಷರ ಬಾಸ್ಕೆಟ್‌ಬಾಲ್ ಸತತ ಮೂರನೆ ಬಾರಿ ಚಿನ್ನ ಗೆಲ್ಲುವ ಕಡೆಗೆ ನೋಡುತ್ತಿದೆ. ಮಹಿಳಾ ಫುಟ್ಬಾಲ್ ತಂಡ ಮೊದಲಬಾರಿ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹಣಾಹಣಿ ನಡೆಸಲಿದೆ. ರೋವಿಂಗ್‌ನಲ್ಲಿ ಮಹಿಳಾ ತಂಡ 8ನೆ ಬಾರಿ ಪದಕದ ಬೇಟೆ ನಡೆಸಲಿದೆ. ಅದು 2006ರ ಬಳಿಕ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಅಜೇಯ ಓಟ ಮುಂದುವರಿಸಿದೆ.
ಜಿಮ್ನಾಸ್ಟಿಕ್ಸ್‌ನಲ್ಲಿ ಅಮೆರಿಕದ ಮಹಿಳೆಯರು ಮತ್ತೊಮ್ಮೆ ಮೇಲುಗೈ ಸಾಧಿಸುವ ಪ್ರಯತ್ನ ನಡೆಸಲಿದ್ದಾರೆ. ಕಳೆದ ನಾಲ್ಕು ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.