ಆಸ್ಟ್ರೇಲಿಯದ ನಾಯಕ ಸ್ಮಿತ್‌ಗೆ ರಾಜದಂಡ ಪ್ರದಾನ

Update: 2016-07-25 18:23 GMT

 ಕೊಲಂಬೊ, ಜು.25: ಐಸಿಸಿ ಟೆಸ್ಟ್ ತಂಡಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದಿರುವ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್ ಸ್ಮಿತ್‌ಗೆ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಸಿಇಒ ಡೇವಿಡ್ ರಿಚರ್ಡ್‌ಸನ್ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ರಾಜದಂಡ ಹಾಗೂ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ನೀಡಿ ಗೌರವಿಸಿದರು.

 ‘‘ನಾವು ನೀಡಿರುವ ರಾಜದಂಡ(ಗದೆ) ಕ್ರಿಕೆಟ್‌ನ ಅತ್ಯಂತ ಕಠಿಣ ಮಾದರಿಯ ಪಂದ್ಯದಲ್ಲಿ ತಂಡ ನೀಡಿರುವ ಅತ್ಯುತ್ತಮ ಪ್ರದರ್ಶನದ ಗುರುತಿನ ಸಂಕೇತವಾಗಿದೆ. ಆಸ್ಟ್ರೇಲಿಯದ ಪ್ರದರ್ಶನ ಶ್ಲಾಘನೀಯವಾಗಿದ್ದು, ಈ ಪ್ರಶಸ್ತಿ ಗೆಲುವಿಗೆ ಅದು ಅರ್ಹ ತಂಡವಾಗಿದೆ’’ ಎಂದು ರಿಚರ್ಡ್‌ಸನ್ ಹೇಳಿದ್ದಾರೆ.

ಆಸ್ಟ್ರೇಲಿಯ ತಂಡ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಎಪ್ರಿಲ್ 1ರ ತನಕ 12 ತಿಂಗಳ ಅವಧಿಯಲ್ಲಿ 10 ಟೆಸ್ಟ್ ಪಂದ್ಯಗಳನ್ನು ಜಯಿಸಿದೆ.

‘‘ವಿಶ್ವದ ನಂ.1 ಟೆಸ್ಟ್ ತಂಡ ಎನಿಸಿಕೊಂಡಿರುವುದು ಮಹಾಗೌರವ. ಕಳೆದ 12 ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಎಲ್ಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಎಲ್ಲ ಶ್ರೇಯಸ್ಸು ಸಲ್ಲುತ್ತದೆ. ನಮ್ಮ ಯುವ ತಂಡದ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಮಗೆ ಇನ್ನೂ ಸಾಧನೆ ಮಾಡಲು ಬಾಕಿಯಿದೆ. ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ವಿದೇಶ ಹಾಗೂ ಸ್ವದೇಶಿ ನೆಲದಲ್ಲಿ ನಾವು ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ವಿದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಉಪಖಂಡದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವುದು ನಮಗೊಂದು ಸವಾಲು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇವೆ’’ ಎಂದು ಸ್ಮಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News