ಒಲಿಂಪಿಕ್ಸ್‌ನಲ್ಲಿ ಪ್ರತಿಯೊಂದು ಪಂದ್ಯವೂ ಕಠಿಣ:ಶ್ರೀಜೇಶ್

Update: 2016-07-25 18:26 GMT

 ಬೆಂಗಳೂರು, ಜು.25: ಒಲಿಂಪಿಕ್ಸ್‌ನಲ್ಲಿ ಪ್ರತಿಯೊಂದು ಪಂದ್ಯವೂ ಸವಾಲಿನಿಂದ ಕೂಡಿದ್ದು, 12 ತಂಡಗಳೂ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅರ್ಹತೆ ಹೊಂದಿವೆ ಎಂದು ಭಾರತದ ಪುರುಷರ ಹಾಕಿ ತಂಡದ ನಾಯಕ ಪಿ.ಆರ್.ಶ್ರೀಜೇಶ್ ತಿಳಿಸಿದ್ದಾರೆ.
‘‘ಒಲಿಂಪಿಕ್ಸ್‌ನಲ್ಲಿ ಯಾವುದೂ ಸುಲಭವಲ್ಲ. ಪ್ರತಿಯೊಂದು ಪಂದ್ಯವೂ ಅತ್ಯಂತ ಸವಾಲಿನದ್ದಾಗಿದೆ ಎಂದು ಸ್ಪೇನ್‌ಗೆ ತೆರಳುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು.
‘‘ ಪ್ರತಿಯೊಂದು ಗುಂಪಿನಲ್ಲೂ ಆರು ತಂಡಗಳಿದ್ದು, ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಆದ ಕಾರಣ ಕ್ವಾರ್ಟರ್ ಫೈನಲ್‌ಗೇರುವುದಕ್ಕಾಗಿ ಹೆಚ್ಚು ಅಂಕಗಳನ್ನು ಗಳಿಸಬೇಕಾಗಿದೆ. ಈಗಿನ ವಿಧಾನವೂ ಎಲ್ಲಾ ತಂಡಗಳಿಗೂ ಅನುಕೂಲವಾಗಿವೆ ’’ ಎಂದು ಅವರು ಹೇಳಿದರು.
ಈಗಿನ ವಿಧಾನದಲ್ಲಿ ಎರಡು ಗುಂಪುಗಳಲ್ಲಿ ತಲಾ ಆರು ತಂಡಗಳು ಕ್ವಾರ್ಟರ್ ಫೈನಲ್‌ಗೇರಲು ಹಣಾಹಣಿ ನಡೆಸಲಿದೆ ಎಂದು ಮಾಹಿತಿ ನೀಡಿದರು.
  ‘‘ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಯಾವುದೇ ತಂಡವನ್ನು ಎದುರಿಸಲು ತಯಾರಿದೆ. ನಮಗೆ ಇಂತಹ ತಂಡ ಎದುರಾಳಿಯಾಗಬೇಕು ಅಥವಾ ಇಂತಹ ತಂಡದ ಸವಾಲು ಎದುರಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ಸವಾಲು ಎದುರಾದರೂ ಭಾರತ ಹೋರಾಟಕ್ಕೆ ತಯಾರಿದೆ ’’ ಎಂದು ಶ್ರೀಜೇಶ್ ಹೇಳಿದರು.
‘‘ ಹಾಕಿ ಟೀಮ್ ಗೇಮ್ ಮತ್ತು ಆಟದಲ್ಲಿ ನಿರತ 11 ಆಟಗಾರರು ತಂಡದ ನಾಯಕರಂತೆ ಇರುತ್ತಾರೆ. ಪ್ರತಿಯೊಬ್ಬರ ಮೇಲೂ ಪ್ರತಿಯೊಂದು ಜವಾಬ್ದಾರಿ ಇರುತ್ತದೆ.ನಾವು ಹಾಕಿ ತಂಡವಾಗಿ ರಿಯೋಗೆ ತೆರಳುತ್ತಿದ್ದೇವೆ ’’ ಎಂದು ಶ್ರೀಜೇಶ್ ಅಭಿಪ್ರಾಯಪಟ್ಟರು.
ಭಾರತ ರಿಯೋ ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಸ್ಪೇನ್‌ನಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಸ್ಪೇನ್‌ನ ವಾತಾವರಣವು ರಿಯೋ ವಾತಾವರಣಕ್ಕಿಂತ ಭಿನ್ನವಾಗಿದೆ ಎಂದು ಶ್ರೀಜೇಶ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News