ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ: ಇಂದ್ರಜೀತ್ ಆರೋಪ
ಹೊಸದಿಲ್ಲಿ, ಜು.26: ರಿಯೋ ಒಲಿಂಪಿಕ್ಸ್‌ಗೆ ಮೊದಲು ಡೋಪಿಂಗ್ ಹಗರಣದಲ್ಲಿ ಸಿಲುಕಿದ ಎರಡನೆ ಅಥ್ಲೀಟ್ ಆಗಿರುವ ಇಂದ್ರಜೀತ್ ಸಿಂಗ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ನನ್ನ ಸ್ಯಾಂಪಲ್‌ನ್ನು ವಿರೂಪಗೊಳಿಸಲಾಗಿದೆ. ಆರೋಪದ ಹಿಂದೆ ಪಿತೂರಿ ಅಡಗಿದೆ ಎಂದು ಆರೋಪಿಸಿದ್ದಾರೆ.
28ರ ಹರೆಯದ ಇಂದ್ರಜೀತ್ ‘ಎ’ ಮಾದರಿಯ ಡೋಪಿಂಗ್ ಪರೀಕ್ಷೆಯಲ್ಲಿ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ಮಾಹಿತಿ ನೀಡಿದೆ. ಜೂ.22 ರಂದು ಇಂದ್ರಜೀತ್‌ರ ಡೋಪಿಂಗ್‌ಪರೀಕ್ಷೆ ನಡೆಸಲಾಗಿತ್ತು.
2014ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಇಂದ್ರಜೀತ್ ‘ಬಿ’ ಸ್ಯಾಂಪಲ್ ಪರೀಕ್ಷೆಗೆ ಒಳಪಡಲು ಇಚ್ಛಿಸಿದರೆ, ಏಳು ದಿನಗಳಲ್ಲಿ ಈ ಪರೀಕ್ಷೆಗೆ ಒಳಗಾಗಬೇಕು ಎಂದು ನಾಡಾ ತಿಳಿಸಿದೆ.
‘‘ನನ್ನನ್ನು ಉದ್ದೇಶಪೂರ್ವಕವಾಗಿ ಡೋಪಿಂಗ್ ಬಲೆಗೆ ಸಿಲುಕಿಸಲಾಗಿದ್ದು, ನನ್ನ ಸ್ಯಾಂಪಲ್‌ನ್ನು ವಿರೂಪಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಏನೋ ತಪ್ಪು ನಡೆದಿದೆ. ವೈದ್ಯರು ಪರೀಕ್ಷೆ ನಡೆಸಿರುವ ಕಾರಣ ನಾನು ಹೆಚ್ಚೇನೂ ಹೇಳಲಾರೆ. ಈ ದೇಶದಲ್ಲಿ ಧ್ವನಿ ಎತ್ತಲು ಯತ್ನಿಸುವವರನ್ನು ಬಲವಂತವಾಗಿ ಬಾಯಿ ಮುಚ್ಚಿಸಲಾಗುತ್ತದೆ. ಆಟಗಾರನೊಬ್ಬ ಆರೋಗ್ಯಕ್ಕೆ ಹಾನಿಕರವಾದ ದ್ರವ್ಯವನ್ನು ಸೇವಿಸಲು ಸಾಧ್ಯವೇ ಇಲ್ಲ’’ ಎಂದು ಇಂದ್ರಜೀತ್ ಹೇಳಿದ್ಧಾರೆ.
ಇಂದ್ರಜೀತ್ ನ್ಯಾಶನಲ್ ಕ್ಯಾಂಪ್‌ಗಳಲ್ಲಿ ತರಬೇತಿ ನಡೆಸದೇ ತನ್ನದೇ ವೈಯಕ್ತಿಕ ಕೋಚ್‌ರೊಂದಿಗೆ ತರಬೇತಿ ನಡೆಸುತ್ತಿದ್ದರು. ಭಾರತದ ಅಥ್ಲೆಟಿಕ್ ಅಧಿಕಾರಿಗಳನ್ನು ಸದಾ ಟೀಕಿಸುತ್ತಿದ್ದರು.
‘‘ನಾನು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದನ್ನು ನೋಡಿ ಆಘಾತವಾಯಿತು. ನಾನು ಡೋಪಿಂಗ್ ಟೆಸ್ಟ್‌ಗೆ ಒಳಗಾಗಲಾರೆ ಎಂದು ಎಲ್ಲೂ ಹೇಳಿಲ್ಲ. ಅಥ್ಲೀಟ್‌ಗಳನ್ನು ಸ್ಪರ್ಧಿಸದಂತೆ ಮಾಡಲು ಇದೊಂದು ಉತ್ತಮ ಹಾದಿಯಾಗಿದೆ. ಕಳೆದ ವರ್ಷ ಕನಿಷ್ಠ 50 ಬಾರಿ ಡೊಪಿಂಗ್ ಪರೀಕ್ಷೆಗೆ ಒಳಗಾಗಿದ್ದೆ. ಈ ವರ್ಷ ಕೂಡ ಡೋಪಿಂಗ್ ಪರೀಕ್ಷೆಗೆ ಒಳಪಟ್ಟಿದ್ದೆ. ಇಷ್ಟಾಗಿಯೂ ನನ್ನ ಬಾಯಿ ಮುಚ್ಚಿಸಲು ಅಭಿಯಾನವೊಂದನ್ನು ನಡೆಸಲಾಗುತ್ತಿತ್ತು’’ ಎಂದು ಇಂದ್ರಜೀತ್ ಹೇಳಿದ್ದಾರೆ.
‘‘ನಾನು ಭಾರತೀಯ ಅಥ್ಲೀಟ್‌ಗಳ ಪರವಾಗಿ ಅಧಿಕಾರಿಗಳ ವಿರುದ್ಧ ನೇರವಾಗಿ ಮಾತನಾಡುವೆ. ನನ್ನ ನೇರ ನಡೆ-ನುಡಿಯೇ ನನಗೆ ಮುಳುವಾಗಿದೆ. ಒಂದು ವರ್ಷದಿಂದ ಹಲವು ಘಟನೆಗಳು ನಡೆದಿವೆ. ನಾನು ಡೋಪಿಂಗ್ ಟೆಸ್ಟ್ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ನಾನು ಅಂತಹ ಆಟಗಾರನಲ್ಲ. ಇಂತಹ ಅಪಪ್ರಚಾರ ಆಟಗಾರನ ಮೇಲೆ ಕೆಟ್ಟ ಪರಿಣಾಮಬೀರುತ್ತದೆ’’ ಎಂದು ಇಂದ್ರಜೀತ್ ಹೇಳಿದ್ದಾರೆ.
ಇಂದ್ರಜಿತ್ ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಭಾರತದ ಮೊದಲ ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್ ಆಗಿದ್ದರು. ಕ್ರೀಡಾ ಸಚಿವಾಲಯದ ಟಾರ್ಗೆಟ್ ಫಾರ್ ಪೊಡಿಯಮ್(ಟಾಪ್) ಯೋಜನೆಯಡಿಯಲ್ಲಿ ಈ ವರ್ಷಾರಂಭದಲ್ಲಿ ಅಮೆರಿಕದಲ್ಲೂ ತರಬೇತಿ ನಡೆಸಿದ್ದರು.