ಒಲಿಂಪಿಕ್ಸ್ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಂಘಟಕರ ಭರವಸೆ
ರಿಯೋ ಡಿಜನೈರೊ, ಜು.26: ರಿಯೋ ಒಲಿಂಪಿಕ್ಸ್ ಗ್ರಾಮದಲ್ಲಿ ಅಸ್ತವ್ಯಸ್ತಗೊಂಡಿರುವ ಶೌಚಾಲಯ, ಅಪಾಯಕಾರಿ ವೈಯರಿಂಗ್ ಹಾಗೂ ಇತರ ಸಮಸ್ಯೆಗಳನ್ನು ವಾರಾಂತ್ಯದಲ್ಲಿ ಸರಿಪಡಿಸಲಾಗುವುದು ಎಂದು ಬ್ರೆಝಿಲ್ ಆಯೋಜಕರು ಭರವಸೆ ನೀಡಿದ್ದಾರೆ.
ಆಸ್ಟ್ರೇಲಿಯದ ಒಲಿಂಪಿಕ್ಸ್ ತಂಡ ಪಶ್ಚಿಮ ರಿಯೋದಲ್ಲಿರುವ ಅಪಾರ್ಟ್‌ಮೆಂಟ್‌ನ ಕಾಂಪ್ಲೆಕ್ಸ್‌ಗೆ ತೆರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬ್ರೆಝಿಲ್ ಸಂಘಟನಾ ಸಮಿತಿಯ ವಕ್ತಾರ ಮಾರಿಯೊ ಆ್ಯಂಡ್ರೆಡಾ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ.
ಒಲಿಂಪಿಕ್ ವಿಲೇಜ್‌ನಲ್ಲಿನ ಸಮಸ್ಯೆಯನ್ನು ಬಗೆಹರಿಸಲು 630 ಕಾರ್ಮಿಕರು ಕಾರ್ಯನಿರತರಾಗಿದ್ದಾರೆ. ಗುರುವಾರದೊಳಗೆ ಎಲ್ಲ ಕೆಲಸವನ್ನು ಮುಗಿಸಿ ಅಥ್ಲೀಟ್‌ಗಳ ಕೊಠಡಿಗಳನ್ನು ಸಜ್ಜುಗೊಳಿಸಲಿದ್ದಾರೆ ಎಂದು ಆ್ಯಂಡ್ರೆಡಾ ಹೇಳಿದ್ದಾರೆ.
ದಕ್ಷಿಣ ಅಮೆರಿಕದ ಆತಿಥ್ಯದಲ್ಲಿ ಮೊದಲ ಬಾರಿ ನಡೆಯುತ್ತಿರುವ ಒಲಿಂಪಿಕ್ಸ್ ಗೇಮ್ಸ್ ತಯಾರಿಯಲ್ಲಿ ಹಲವು ಸಮಸ್ಯೆಗಳು ತಲೆದೋರಿರುವುದು ಬ್ರೆಝಿಲ್ ಒಲಿಂಪಿಕ್ಸ್ ಆಯೋಜಕರನ್ನು ಮುಜುಗರಕ್ಕೀಡು ಮಾಡಿದೆ.
ಝಿಕಾ ವೈರಸ್‌ಗಳ ಹಾವಳಿ, ಒಲಿಂಪಿಕ್ ಸೈಲಿಂಗ್ ಹಾಗೂ ರೋವಿಂಗ್ ಪ್ರದೇಶಗಳಲ್ಲಿ ಭಾರೀ ಮಾಲಿನ್ಯ ಹಾಗೂ ರಿಯೋ ನಗರದೆಲ್ಲೆಡೆ ನಡೆಯುತ್ತಿರುವ ಅಪರಾಧ ಕೃತ್ಯಗಳು ರಿಯೋ ಗೇಮ್ಸ್‌ನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ