ಐಸಿಸಿ ರ್ಯಾಂಕಿಂಗ್ಸ್: ಅಗ್ರ ಸ್ಥಾನಕ್ಕೆ ಮರಳಿದ ಅಶ್ವಿನ್
ಹೊಸದಿಲ್ಲಿ, ಜು.26: ಆ್ಯಂಟಿಗುವಾದ ನಾರ್ಥ್ ಸೌಂಡ್‌ನಲ್ಲಿ ರವಿವಾರ ಕೊನೆಗೊಂಡ ವೆಸ್ಟ್‌ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಗೊಂಚಲು ಪಡೆದ ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.
ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಉರುಳಿಸಿದ್ದ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಷಾ ವಿಶ್ವದ ನಂ.1 ಬೌಲರ್ ಎನಿಸಿಕೊಂಡಿದ್ದರು. ಆಗ ಅಶ್ವಿನ್ ರ್ಯಾಂಕಿಂಗ್‌ನಲ್ಲಿ ಹಿಂಭಡ್ತಿ ಪಡೆದಿದ್ದರು.
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ 83 ರನ್‌ಗೆ 7 ವಿಕೆಟ್ ಉಡಾಯಿಸಿದ್ದ ಅಶ್ವಿನ್ ಐದು ಅಂಕವನ್ನು ಗಳಿಸಿ ಅಗ್ರ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆದ 2ನೆ ಟೆಸ್ಟ್‌ನಲ್ಲಿ ಯಾಸಿರ್ ಷಾ ಕೇವಲ ಒಂದು ವಿಕೆಟ್ ಪಡೆದಿದ್ದ ಕಾರಣ ನಂ.1 ಸ್ಥಾನವನ್ನು ಅಶ್ವಿನ್‌ಗೆ ಬಿಟ್ಟುಕೊಟ್ಟಿದ್ದಾರೆ.
ಅಶ್ವಿನ್ 2015ರ ಅಂತ್ಯಕ್ಕೆ ವಿಶ್ವದ ನಂ.1 ಬೌಲರ್ ಎನಿಸಿಕೊಂಡಿದ್ದರು. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 113 ರನ್ ಗಳಿಸಿರುವ ಅಶ್ವಿನ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಮೇಲಕ್ಕೇರಿ 45ನೆ ಸ್ಥಾನ ತಲುಪಿದ್ದಾರೆ.
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ 2 ಸ್ಥಾನ ಭಡ್ತಿ ಪಡೆದು 12ನೆ ಸ್ಥಾನಕ್ಕೇರಿದ್ದಾರೆ.