ಆರು ಅಥ್ಲೀಟ್‌ಗಳಿಗೆ ಪ್ರೋತ್ಸಾಹ ಧನ ಪ್ರಕಟಿಸಿದ ಒಡಿಶಾ ಸರಕಾರ
ಭುವನೇಶ್ವರ, ಜು.26: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ರಾಜ್ಯದ ಆರು ಅಥ್ಲೀಟ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಒಡಿಶಾ ಸರಕಾರ ಮಂಗಳವಾರ 60 ಲಕ್ಷ ರೂ.ವಿಶೇಷ ಪ್ರೋತ್ಸಾಹ ಧನ ಘೋಷಿಸಿದೆ.
ವಿಶೇಷ ಪ್ರೋತ್ಸಾಹ ಧನ ಪಡೆಯಲಿರುವ ಮಹಿಳಾ ಕ್ರೀಡಾಪಟುಗಳೆಂದರೆ: ಸ್ರಬಾನಿ ನಂದಾ, ದ್ಯುತಿ ಚಂದ್(ಇಬ್ಬರೂ ಓಟಗಾರ್ತಿಯರು), ದೀಪ್ ಗ್ರೇಸ್ ಎಕ್ಕಾ, ನಮಿತಾ ಟೊಪ್ಪೊ, ಲಿಲಿಮಾ ಮಿಂಝ್ ಹಾಗೂ ಸುನಿತಾ ಲಾಕ್ರಾ(ಎಲ್ಲರೂ ಹಾಕಿ).
ಆಗಸ್ಟ್ 5 ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ ತಯಾರಿಗಾಗಿ ಪ್ರತಿಯೊಬ್ಬ ಆಟಗಾರರು 10 ಲಕ್ಷ ರೂ. ಪಡೆಯಲಿದ್ದಾರೆ.
‘‘ರಾಜ್ಯದ ಆರು ಕ್ರೀಡಾಪಟುಗಳು ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸಿ, ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತರುವ ವಿಶ್ವಾಸ ನನಗಿದೆ’’ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
ದುತೀ ಚಂದ್ ಹಾಗೂ ಸ್ರಬಾನಿ ನಂದಾ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ 100 ಮೀ. ಹಾಗೂ 200 ಮಿ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಇಬ್ಬರು ಓಟಗಾರ್ತಿಯರು 4+100 ಮೀ.ರಿಲೇಯಲ್ಲೂ ಸ್ಪರ್ಧಿಸಲಿದ್ದಾರೆ.
36 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಮಹಿಳಾ ಹಾಕಿ ತಂಡದಲ್ಲಿ ಒಡಿಶಾದ ನಾಲ್ವರು ಆಟಗಾರ್ತಿಯರು ಸ್ಪರ್ಧಿಸುತ್ತಿದ್ದಾರೆ.