ಆಗಸ್ಟ್ 5ಕ್ಕೆ ಮುಂಬೈನಲ್ಲಿ ಬಿಸಿಸಿಐ ವಿಶೇಷ ಸಾಮಾನ್ಯ ಸಭೆ
ಹೊಸದಿಲ್ಲಿ, ಜು.26: ಸುಪ್ರೀಂಕೋರ್ಟ್‌ನ ಆದೇಶದನ್ವಯ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಸಂಬಂಧ ಚರ್ಚೆ ನಡೆಸಲು ಬಿಸಿಸಿಐ ಆಗಸ್ಟ್ 5 ರಂದು ಮುಂಬೈನಲ್ಲಿ ವಿಶೇಷ ಸಾಮಾನ್ಯ ಸಭೆ ಕರೆದಿದೆ.
ಮುಂಬೈನ ಕ್ರಿಕೆಟ್ ಸೆಂಟರ್‌ನಲ್ಲಿ ಆಗಸ್ಟ್ 5 ರಂದು ಎಸ್‌ಜಿಎಂ ಏರ್ಪಡಿಸಿರುವ ಕುರಿತಂತೆ ಬಿಸಿಸಿಐಯಿಂದ ನಾವು ಇ-ಮೇಲ್ ಸ್ವೀಕರಿಸಿದ್ದೇವೆ. ಸಭೆಯ ಕಾರ್ಯಸೂಚಿಯಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಲಾಗಿದೆ ಎಂದು ಮುಂಬೈ ರಾಜ್ಯ ಘಟಕದ ಸದಸ್ಯರು ಹೇಳಿದ್ದಾರೆ.
ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಸದಸ್ಯರಿಂದ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಎಸ್‌ಜಿಎಂನ್ನು ಕರೆಯಲಾಗಿದೆ.
ಹೊಸದಿಲ್ಲಿಯಲ್ಲಿ ಆಗಸ್ಟ್ 9 ರಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಲೋಧಾ ಸಮಿತಿಯನ್ನು ಭೇಟಿಯಾಗುವ ಮೊದಲು ಹಿರಿಯ ಪದಾಧಿಕಾರಿಗಳು ರಾಜ್ಯ ಘಟಕದ ಹಿರಿಯ ಅಧಿಕಾರಿಗಳಿಂದ ಅಭಿಪ್ರಾಯ ಪಡೆಯಲಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಜಿಎಂ ವೇಳೆ ಬಿಸಿಸಿಐನ ವಕೀಲರ ತಂಡವೂ ಉಪಸ್ಥಿತರಿರುವ ಸಾಧ್ಯತೆಯಿದೆ.