ನಾಡಾ ತೀರ್ಪು ಮುಂದೂಡಿಕೆ
ಹೊಸದಿಲ್ಲಿ, ಜು.28: ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ಕುಸ್ತಿಪಟು ನರಸಿಂಗ್ ಯಾದವ್ ವಿರುದ್ಧ ಡೋಪಿಂಗ್ ಪ್ರಕರಣದ ಅಂತಿಮ ತೀರ್ಪನ್ನು ಮುಂದೂಡಿದೆ.
ನಾಡಾ ಸಮಿತಿ ಶನಿವಾರ ಅಥವಾ ಸೋಮವಾರ ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ.
ನರಸಿಂಗ್ ಬುಧವಾರ ನಾಡಾ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದರು. ಮೂರೂವರೆ ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಯಾದವ್ ಪರ ವಕೀಲರು ತಮ್ಮ ವಾದವನ್ನು ಮಂಡಿಸಿದ್ದರು. ಆಹಾರದಲ್ಲಿ ನಿಷೇಧಿತ ಮದ್ದು ಬೆರೆಸಿ ತನ್ನನ್ನು ಸಿಲುಕಿಸಲಾಗಿದೆ ಎಂಬ ಆರೋಪವನ್ನು ಮನದಟ್ಟಾಗುವ ರೀತಿಯಲ್ಲಿ ಸಾಬೀತುಪಡಿಸಲು ಕುಸ್ತಿಪಟು ಯಾದವ್ ವಿಫಲರಾಗಿದ್ದಾರೆ. ಅವರು ಕ್ಷಮೆಗೆ ಅರ್ಹರಾಗಿಲ್ಲ ಎಂಬುದು ನಾಡಾದ ವಾದವಾಗಿದೆ ಎಂದು ಗುರುವಾರ ಅಂತ್ಯಗೊಂಡ ವಿಚಾರಣೆಯ ಬಳಿಕ ನಾಡಾ ವಕೀಲರಾದ ಗೌರಂಗ್ ಕಾಂತ್ ಸುದ್ದಿಗಾರರಿಗೆ ತಿಳಿಸಿದ್ಧಾರೆ.
ನರಸಿಂಗ್ ದೇಹದೊಳಗೆ ನಿಷೇಧಿತ ದ್ರವ್ಯ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ಮನದಟ್ಟು ಮಾಡಿಲ್ಲ. ತಾನು ಏನೂ ತಪ್ಪು ಮಾಡಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಸಾಯ್ ಕೇಂದ್ರದಲ್ಲಿ ಅವರನ್ನು ಕಡೆಗಣಿಸಲಾಗಿತ್ತು ಎಂಬ ಮಾತು ಸರಿಯಲ್ಲ. ನಿಷೇಧಿತ ದ್ರವ್ಯ ಸೇವಿಸಿದ ಅಥ್ಲೀಟ್‌ಗಳಿಗೆ ನಾಲ್ಕು ವರ್ಷ ನಿಷೇಧ ಹೇರಲಾಗುತ್ತದೆ. ಕೆಲವೊಮ್ಮೆ ಎರಡು ವರ್ಷಕ್ಕೂ ಇಳಿಯಲಿದೆ. ಶಿಕ್ಷೆಯ ಪ್ರಮಾಣ ತೀರ್ಪನ್ನು ಅವಲಂಬಿಸಿರುತ್ತದೆ ಎಂದು ಕಾಂತ್ ತಿಳಿಸಿದರು.
ಕಳಂಕಿತ ನರಸಿಂಗ್ ಆ.5 ರಿಂದ 21ರ ತನಕ ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ವಿಶ್ವಾಸದಲ್ಲಿದ್ದಾರೆ.
‘‘ನಾನು ಈಗಲೂ ಪ್ರಾಕ್ಟೀಸ್ ನಡೆಸುತ್ತಿದ್ದೇನೆ. ರಿಯೋಗೆ ತೆರಳುವ ವಿಶ್ವಾಸದಲ್ಲಿರುವೆ. ಶನಿವಾರ ಅಥವಾ ಸೋಮವಾರ ಎಲ್ಲವೂ ಸರಿಯಾಗುವ ವಿಶ್ವಾಸದಲ್ಲಿದ್ದೇನೆ ಎಂದು ಸುದ್ದಿಗಾರರಿಗೆ ಯಾದವ್ ತಿಳಿಸಿದ್ದಾರೆ.
ರಾಣಾ ಬದಲಿಗೆ ನರಸಿಂಗ್ ಆಯ್ಕೆಗೆ ಅಭ್ಯಂತರವಿಲ್ಲ: ಐಒಎ
ಹೊಸದಿಲ್ಲಿ, ಜು.28: ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ಒಂದು ವೇಳೆ ಕುಸ್ತಿಪಟು ನರಸಿಂಗ್ ಯಾದವ್‌ಗೆ ಕ್ಲೀನ್‌ಚಿಟ್ ನೀಡಿದರೆ ಪ್ರವೀಣ್ ರಾಣಾ ಬದಲಿಗೆ ನರಸಿಂಗ್‌ರನ್ನು ರಿಯೋ ಒಲಿಂಪಿಕ್ಸ್‌ಗೆ ಕಳುಹಿಸಿಕೊಡಲು ತನ್ನದೇನೂ ಅಭ್ಯಂತರವಿಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಗುರುವಾರ ಸ್ಪಷ್ಟಪಡಿಸಿದೆ.
ನರಸಿಂಗ್ ನಿಷೇಧಿತ ಉದ್ದೀಪನಾ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದ ಕಾರಣ ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) 74 ಕೆಜಿ ತೂಕದ ಫ್ರ್ರೀಸ್ಟೈಲ್ ವಿಭಾಗದಲ್ಲಿ ನರಸಿಂಗ್ ಬದಲಿಗೆ ಪ್ರವೀಣ್ ರಾಣಾ ಹೆಸರನ್ನು ಶಿಫಾರಸು ಮಾಡಿತ್ತು. ನರಸಿಂಗ್ ವಿರುದ್ಧ ಕೇಳಿ ಬಂದಿರುವ ಡೋಪಿಂಗ್‌ಪ್ರಕರಣವನ್ನು ನಾಡಾ ಶಿಸ್ತು ಸಮಿತಿ ವಿಚಾರಣೆ ನಡೆಸುತ್ತಿದೆ. ಗುರುವಾರವೇ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ.
‘‘ಐಒಎ ಒಂದು ಪೋಸ್ಟ್ ಆಫೀಸ್ ಇದ್ದಂತೆ. ನಾವು ಡಬ್ಲುಎಫ್‌ಐ ಬಯಕೆಯಂತೆ ನರಸಿಂಗ್ ಬದಲಿಗೆ ಪ್ರವೀಣ್ ರಾಣಾ ಹೆಸರನ್ನು ನಾಮನಿರ್ದೇಶನ ಮಾಡಿದ್ದೆವು. ವಿಶ್ವ ಕುಸ್ತಿ ಸಂಘಟನೆ(ಯುಡಬ್ಲುಡಬ್ಲು) ಅದನ್ನು ಸ್ವೀಕರಿಸಿದೆ’’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.
ನಾಡಾ ಸಮಿತಿಯಿಂದ ನರಸಿಂಗ್ ಕ್ಲೀನ್‌ಚಿಟ್ ಪಡೆದರೆ, ಡಬ್ಲ್ಯುಎಫ್‌ಐ ನರಸಿಂಗ್ ಹೆಸರನ್ನು ಮತ್ತೊಮ್ಮೆ ಕಳುಹಿಸಬೇಕೆಂದು ಸೂಚಿಸಿದರೆ, ಜಾಗತಿಕ ಒಕ್ಕೂಟ ಇದಕ್ಕೆ ಸಮ್ಮತಿ ನೀಡಿದರೆ ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಐಒಎ ಹೇಳಿದೆ.