×
Ad

ರಿಯೋ ಗೇಮ್ಸ್: ಬ್ರೆಝಿಲ್ ತಲುಪಿದ ಭಾರತ

Update: 2016-07-28 23:27 IST

ರಿಯೋ ಡಿಜನೈರೊ(ಬ್ರೆಝಿಲ್), ಜು.28: ರಿಯೋ ಒಲಿಂಪಿಕ್ಸ್ ಆರಂಭವಾಗಲು ದಿನಗಣನೆ ಆರಂಭವಾಗಿರುವಂತೆಯೇ ಭಾರತೀಯ ಅಥ್ಲೀಟ್‌ಗಳು ತಂಡವಾಗಿ ರಿಯೋ ಡಿ ಜನೈರೊಕ್ಕೆ ಆಗಮಿಸುತ್ತಿದ್ದಾರೆ.

 ಹೆಚ್ಚಿನ ವಿಭಾಗಗಳು ತಮ್ಮ ತಂಡಗಳನ್ನು ಹಂತ ಹಂತವಾಗಿ ಬ್ರೆಝಿಲ್‌ಗೆ ಕಳುಹಿಸಿಕೊಡುತ್ತಿವೆ. ಉಳಿದವರು ಮುಂದಿನ ಕೆಲವೇ ದಿನಗಳಲ್ಲಿ ಇಲ್ಲಿಗೆ ಆಗಮಿಸಲಿದ್ದಾರೆ.

ಶುಕ್ರವಾರ ಬೆಳಗಿನ ಉಪಹಾರದ ವೇಳೆ ಡೈನಿಂಗ್ ಹಾಲ್‌ನಲ್ಲಿ ಭಾರತೀಯ ಅಥ್ಲೀಟ್‌ಗಳ ನಿಯೋಗದ ಚೀಫ್ ಡಿ ಮಿಶನ್ ರಾಕೇಶ್ ಗುಪ್ತಾ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಅಧ್ಯಕ್ಷ ಥಾಮಸ್ ಬಾಕ್‌ರನ್ನು ಆಕಸ್ಮಿಕ ಭೇಟಿಯಾಗಿ ಸಂಭ್ರಮಪಟ್ಟರು. ಥಾಮಸ್ ಬಾಕ್ ಒಲಿಂಪಿಕ್ಸ್ ಗ್ರಾಮವನ್ನು ವೀಕ್ಷಿಸಲು ಅಲ್ಲಿಗೆ ತೆರಳಿದ್ದರು.

ಗುಪ್ತಾರನ್ನು ಭೇಟಿಯಾದ ಐಒಸಿ ಅಧ್ಯಕ್ಷರು ಭಾರತೀಯ ಅಥ್ಲೀಟ್‌ಗಳ ತಯಾರಿಯ ಬಗ್ಗೆ ವಿಚಾರಿಸಿದ್ದಾರೆ. ಭಾರತೀಯ ಅಥ್ಲೀಟ್‌ಗಳು ಬೇಗನೆ ಆಗಮಿಸುತ್ತಿರುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿ, ಎಲ್ಲರಿಗೂ ಶುಭ ಹಾರೈಸಿದ್ದಾರೆ.

ಐಒಸಿ ಅಧ್ಯಕ್ಷರು ಬೆಳಗ್ಗೆ ಎಲ್ಲ ದೇಶದ ಚೀಫ್‌ಡಿ ಮಿಶನ್‌ರೊಂದಿಗೆ ಸಭೆ ನಡೆಸಿ ಗೇಮ್ಸ್‌ನ ತಯಾರಿಯ ವರದಿಯನ್ನು ನೀಡಿದ್ದಾರೆ.

‘‘ಒಲಿಂಪಿಕ್ಸ್ ಗ್ರಾಮದಲ್ಲಿ ಭಾರತೀಯ ತಂಡದ ಅಥ್ಲೀಟ್‌ಗಳು ಆತಿಥೇಯ ಬ್ರೆಝಿಲ್ ತಂಡದ ಪಕ್ಕದಲ್ಲಿಯೇ ನೆಲೆಸಲಿದೆ. ಎಲ್ಲ ವ್ಯವಸ್ಥೆಗಳು ಚೆನ್ನಾಗಿವೆ’’ ಎಂದು ಗುಪ್ತಾ ತಿಳಿಸಿದ್ದಾರೆ.

ಶೂಟರ್‌ಗಳಾದ ಜಿತು ರಾಯ್, ಪ್ರಕಾಶ್ ನಂಜಪ್ಪ, ಗುರುಪ್ರೀತ್ ಸಿಂಗ್, ಕಿನನ್ ಚೆನ್ನೈ, ಮನ್ವಜೀತ್ ಸಿಂಗ್, ಅಪೂರ್ವಿ ಚಾಂಡೇಲಾ ಹಾಗೂ ಅಯೋನಿಕಾ ಪಾಲ್, ವಾಕರ್‌ಗಳಾದ ಖುಶ್ಬೀರ್ ಕೌರ್, ಸಪ್ನಾ ಪೂನಿಯಾ, ಸಂದೀಪ್ ಕುಮಾರ್, ಮನೀಶ್ ರಾವ್, ಶಾಟ್‌ಪುಟ್ ಪಟುಗಳಾದ ಮನ್‌ಪ್ರೀತ್ ಕೌರ್, ಬಾಕ್ಸರ್‌ಗಳಾದ ಶಿವ ಥಾಪ ಹಾಗೂ ಮನೋಜ್‌ಕುಮಾರ್ ಬ್ರೆಝಿಲ್‌ಗೆ ಬೇಗನೆ ೆಆಗಮಿಸಿದ್ದಾರೆ. ಹೆಚ್ಚಿನ ಅಥ್ಲೀಟ್‌ಗಳ ಕೋಚ್‌ಗಳು ಹಾಗೂ ವೈದ್ಯರೂ ಆಗಮಿಸಿದ್ದಾರೆ.

ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಗರಿಷ್ಠ ಸಂಖ್ಯೆಯ ಅಥ್ಲೀಟ್‌ಗಳನ್ನು ಕಳುಹಿಸಿಕೊಟ್ಟಿದೆ. 2012ರ ಲಂಡನ್ ಗೇಮ್ಸ್‌ನಲ್ಲಿ ಭಾರತ ತಂಡ 2 ಬೆಳ್ಳಿ, 4 ಕಂಚು ಸಹಿತ ಒಟ್ಟು 6 ಪದಕ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News