×
Ad

ಪಾಕಿಸ್ತಾನಿ ಅಭಿಮಾನಿಗಳ ಹೃದಯ ಗೆದ್ದ ಕೊಹ್ಲಿ!

Update: 2016-07-29 21:13 IST

ಜಮೈಕಾ, ಜು.29: ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದ ಒಳಗೆ ಹಾಗೂ ಹೊರಗೆ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಕೊಹ್ಲಿ ಬ್ಯಾಟಿಂಗ್‌ನ ಮೂಲಕ ಮಾತ್ರವಲ್ಲ ಮೈದಾನದ ಹೊರಗೆ ತನ್ನ ಸನ್ನಡತೆಯ ಮೂಲಕವೂ ದೇಶ ಹಾಗೂ ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಪಾಕಿಸ್ತಾನದಲ್ಲೂ ಕೊಹ್ಲಿ ಅಭಿಮಾನಿಯೊಬ್ಬ ಕಾಣಿಸಿಕೊಂಡಿದ್ದಾನೆ.

 ಆ್ಯಂಟಿಗುವಾದಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ ಕೊಹ್ಲಿ ಚೊಚ್ಚಲ ದ್ವಿಶತಕ ಬಾರಿಸಿದಾಗ ಮಿಲಿಯನ್ ಅಭಿಮಾನಿಗಳು ಸಂದೇಶಗಳ ಮಳೆ ಹರಿಸಿದ್ದರು. ಆ ಪೈಕಿ ಪಾಕಿಸ್ತಾನದ ಅಂಪೈರ್ ಅಲೀಮ್ ದರ್ ಅವರ ಮಗ ಕಳುಹಿಸಿಕೊಟ್ಟ ಸಂದೇಶ ಅತ್ಯಂತ ವಿಶೇಷವಾಗಿತ್ತು.

ಪ್ರಸ್ತುತ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ತಂದೆ ಅಲೀಮ್ ದರ್ ಮುಖಾಂತರ ಬಾಲಕ ಹಸನ್ ದರ್ ವಿಡಿಯೋ ಸಂದೇಶವನ್ನು ಕಳುಹಿಸಿಕೊಟ್ಟಿದ್ದಾರೆ. ವಿಡಿಯೋ ಸಂದೇಶವನ್ನು ನೋಡಿ ಖುಷಿಪಟ್ಟ ಕೊಹ್ಲಿ ಅದಕ್ಕೆ ಪ್ರತಿಯಾಗಿ ಜೂನಿಯರ್ ದರ್‌ಗೆ ಸಂದೇಶ ಕಳುಹಿಸಿಕೊಟ್ಟಿದ್ದಾರೆ.

‘‘ಕ್ರಿಕೆಟಿಗನಾಗಲು ನೀನು ಕಠಿಣ ಶ್ರಮಪಡು, ಕನಸನ್ನೂ ಕಾಣುತ್ತಿರು’’ ಎಂದು ಜೂನಿಯರ್ ದರ್‌ಗೆ ಕಳುಹಿಸಿಕೊಟ್ಟ ಸಂದೇಶದಲ್ಲಿ ಕೊಹ್ಲಿ ಸಲಹೆ ನೀಡಿದ್ದಾರೆ. ಹಸನ್ ದರ್‌ಗೆ ಹಸ್ತಾಕ್ಷರವಿರುವ ಬ್ಯಾಟ್‌ನ್ನು ಕಳುಹಿಸಿಕೊಡುವ ಭರವಸೆ ನೀಡಿರುವ ಕೊಹ್ಲಿ ಮುಂದಿನ ಬಾರಿ ಆತನನ್ನು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News