ಪ್ರೊ ಕಬಡ್ಡಿ: ಪಾಟ್ನಾ, ಜೈಪುರ ಫೈನಲ್‌ಗೆ

Update: 2016-07-29 18:04 GMT

ಹೈದರಾಬಾದ್, ಜು.29: ನಾಲ್ಕನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಾಟ್ನಾ ಪೈರಟ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್‌ ಫೈನಲ್ ತಲುಪಿವೆ.

ಇಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಾಟ್ನಾ ತಂಡ ಪುಣೇರಿ ಪಲ್ಟನ್ ವಿರುದ್ಧ 37-33 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಜೈಪುರ ತಂಡ ತೆಲುಗು ಟೈಟಾನ್ಸ್ ತಂಡವನ್ನು 34-24 ಅಂತರದಲ್ಲಿ ಸೋಲಿಸಿತು. ಈ ಗೆಲುವಿನೊಂದಿಗೆ ಫೈನಲ್‌ನಲ್ಲಿ ಸ್ಥಾನ ದೃಢಪಡಿಸಿತು.

ಫೈನಲ್ ಪಂದ್ಯ ಜು.31 ರಂದು ಹೈದರಾಬಾದ್‌ನಲ್ಲಿ ರಾತ್ರಿ 9 ಗಂಟೆಗೆ ನಡೆಯಲಿದೆ.

ಪಾಟ್ನಾ ತಂಡದ ಪರ ಪ್ರದೀಪ್ ನರ್ವಾಲ್ 10 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕುಲ್‌ದೀಪ್ ಸಿಂಗ್ 5, ಸುರ್ಜೀತ್ ಸಿಂಗ್ 5, ರಾಜೇಶ್ ಮಂಡಳ್ 6, ಫಯಾಝ್ ಅಟ್ರಾಚಾಲಿ 3, ಹ್ಯಾಡಿ ಒಶ್ಟೊರಕ್ 4 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಪಲ್ಟನ್ ತಂಡದ ದೀಪಕ್ ನಿವಾಸ್ 9, ನಾಯಕ ಮಂಜೀತ್ ಚಿಲ್ಲಾರ್ 7 ಅಂಕ ಗಳಿಸಿದರು.

ಉಭಯ ತಂಡಗಳಿಂದ ಭಾರೀ ಪೈಪೋಟಿ ಕಂಡು ಬಂದಿದ್ದು, ಅಂತಿಮ 5 ನಿಮಿಷದಲ್ಲಿ ಪಾಟ್ನಾಕ್ಕೆ 11 ಅಂಕಗಳು ಲಭಿಸಿತು. ಇದರಿಂದಾಗಿ ಸತತ 2ನೆ ಬಾರಿ ಫೈನಲ್ ಪ್ರವೇಶಿಸಿತು.

ಪುಣೇರಿ ಪಲ್ಟನ್‌ನ ಮಂಜೀತ್ ಚಿಲ್ಲಾರ್ ಪ್ರೊ ಕಬಡ್ಡಿ ಲೀಗ್‌ನಲ್ಲಿ 400 ಅಂಕ ಗಳಿಸಿದ 2ನೆ ಆಟಗಾರ ಎನಿಸಿಕೊಂಡರು. ಆದರೆ, ಅವರ ಆಟ ತಂಡದ ಗೆಲುವಿಗೆ ಸಾಕಾಗಲಿಲ್ಲ. ಪುಣೇರಿ ಫೈನಲ್ ತಲುಪಲು ಎಡವಿತು.

ಜೈಪುರಕ್ಕೆ ಜೈ: 2ನೆ ಸೆಮಿಫೈನಲ್‌ನಲ್ಲಿ ಜೈಪುರ ತಂಡ ತೆಲುಗು ಟೈಟಾನ್ಸ್‌ಗೆ ಆಘಾತ ನೀಡಿ ಫೈನಲ್ ಪ್ರವೇಶಿಸಿತು. ಕಳೆದ ವರ್ಷ ಸೆಮಿ ಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಕೇವಲ 1 ಅಂಕ ಅಂತರದಿಂದ ಸೋತು ಫೈನಲ್ ತಲುಪುವ ಅವಕಾಶ ವಂಚಿತಗೊಂಡಿತ್ತು. ಆದರೆ, ಈ ಆವೃತ್ತಿಯಲ್ಲಿ ತವರಿನಲ್ಲಿ ಪಂದ್ಯ ನಡೆದರೂ ಲಾಭ ಪಡೆಯುವಲ್ಲಿ ಮತ್ತೊಮ್ಮೆ ವಿಫಲಗೊಂಡಿತು.

ಮಾಜಿ ಚಾಂಪಿಯನ್ ಜೈಪುರ ತಂಡಕ್ಕೆ ನಾಯಕ ಜಸ್ವೀರ್ ಸಿಂಗ್ 9, ಅಜಯ್‌ಕುಮಾರ್ 6, ರಾಜೇಶ್ ನರ್ವಾಲ್, ಅಮಿತ್ ಹೂಡಾ, ರಾಣಾ ಸಿಂಗ್ ತಲಾ 4 ಅಂಕಗಳ ಜಮೆ ಮಾಡಿ ತಂಡದ ಫೈನಲ್ ಹಾದಿ ಸುಗಮಗೊಳಿಸಿದರು.

 ತೆಲುಗು ಟೈಟಾನ್ಸ್‌ನ ನಾಯಕ ರಾಹುಲ್ ಚೌಧರಿ 9 ಅಂಕ, ನಿಲೇಶ್ ಸಾಲುಂಕೆ 6 ಅಂಕ ಜಮೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News