×
Ad

ಒಲಿಂಪಿಕ್ ಗೆ 'ನಡೆದ' ಹಾಲು ಮಾರುವ ಹುಡುಗ ಮನೀಶ್ !

Update: 2016-08-01 17:29 IST

ಡೆಹ್ರಾಡೂನ್, ಆಗಸ್ಟ್ 1: ಬದ್ರೀನಾಥದ ಹೋಟೇಲ್‌ನಲ್ಲಿ ವೈಟರ್ ಕೆಲಸಮಾಡುವ ಜೊತೆಗೆ ಹಾಲು ಮಾರಾಟ ಮಾಡುತ್ತಿದ್ದ ಮನೀಷ್ ರಾವತ್ ತನ್ನ ಪರಿಶ್ರಮದಿಂದ ರಿಯೊ ಒಲಿಂಪಿಕ್ಸ್ ವರೆಗೆ ತಲುಪಿದ್ದಾನೆ. ಸದ್ಯ ಉತ್ತರಾಖಂಡಪೊಲೀಸ್‌ನಲ್ಲಿ ಉದ್ಯೋಗಿಯಾಗಿರುವ ಮನೀಷ್ 20ಕಿಲೋಮೀಟರ್ ನಡಿಗೆ ಸ್ಪರ್ಧಾ ವಿಭಾಗದಲ್ಲಿ ಭಾರತವನ್ನು ರಿಯೊ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಶುಕ್ರವಾರ ರಿಯೊಗೆ ಬಂದಿಳಿದಿರುವ ಮನೀಷ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವವರೆಗಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. "ಬೆರ್ಗಾನದಲ್ಲಿ ಕಾಲೇಜು ಓದುತ್ತಿದ್ದಾಗ ನನ್ನ ಮನೆಯಿಂದ ಏಳು ಕಿಲೋಮೀಟರ್ ದೂರದ ಕಾಲೇಜಿಗೆ ನಡೆದುಕೊಂಡು ಬರುತ್ತಿದ್ದೆ. ಹೀಗೆ ದಿನಾಲೂ ಹದಿನಾಲ್ಕು ಕಿಲೊಮೀಟರ್ ನಡೆದದ್ದರಿಂದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಈಗ ಒಲಿಂಪಿಕ್ಸ್‌ಗೂ ಆಯ್ಕೆಯಾಗಿದ್ದೇನೆ ಎಂದು ಹೇಳಿದ್ದಾರೆ.

2002ರಲ್ಲಿ ಮನೀಷ್ ತಂದೆ ನಿಧನರಾದ ಬಳಿಕ ಹಿರಿಯ ಮಗಆಗಿದ್ದರಿಂದ ಮನೆಯ ಜವಾಬ್ದಾರಿ ಮನೀಷ್ ಹೆಗಲಿಗೇರಿತ್ತು. ಆದ್ದರಿಂದ ಕೃಷಿಕೆಲಸದ ಜೊತೆಗೆ ಎಲ್ಲ ಕೆಲಸವನ್ನು ಅವರು ಮಾಡುತ್ತಿದ್ದರು. ಈ ಕೆಲಸಗಳಿಂದ ಅವರಿಗೆ ಸ್ವಲ್ಪ ಸಂಪಾದನೆ ಆಗುತ್ತಿತ್ತು. 2006ರಲ್ಲಿ ಬದ್ರಿನಾಥದ ಒಂದು ಹೊಟೇಲ್‌ನಲ್ಲಿ ವೈಟರ್ ಆಗಿ ಕೆಲಸ ಮಾಡಿದ್ದರು. ಯಾತ್ರಾರ್ಥಿಗಳಿಗೆ ಗೈಡ್ ಆಗಿಯೂ ರುದ್ರನಾಥಕ್ಕೆ ಹೋಗುತ್ತಿದ್ದರು. ಬದುಕು ಎಲ್ಲ ಸವಾಲುಗಳನ್ನು ಎದುರಿಸುವ ಕಲೆಯನ್ನು ಅವರಿಗೆ ಕಲಿಸಿಕೊಟ್ಟಿತ್ತು. ಬಹಳ ಕಷ್ಟದಿಂದ ದಿನದೂಡಬೇಕಾದ ಸ್ಥಿತಿ ಅಂದಿದ್ದರೂ ಕ್ರೀಡೆಯ ಸಹವಾಸವನ್ನು ಅವರು ತೊರೆಯಲಿಲ್ಲ. ಒಂದು ಸಲ ಅವರು ಗೋಪೇಶ್ವರ ಸ್ಟೇಡಿಯಂನಲ್ಲಿ ಕೋಚ್ ಆಗಿದ್ದ ಅನೂಪ್ ಬಿಷ್ಟ್‌ರನ್ನು ಭೇಟಿಯಾಗಿದ್ದರು. ಅನೂಪ್‌ಮನಿಷ್‌ಗೆ ಗೋಪೇಶ್ವರದಲ್ಲಿ ಪ್ರವೇಶ ದೊರಕಿಸಿಕೊಟ್ಟಿದ್ದರು.

ಅನೂಪ್ ಬಿಷ್ಟ್ ಮಾರ್ಗದರ್ಶನದಂತೆ ಮನೀಷ್ ನಡಿಗೆ ಸ್ಪರ್ಧಾ ಕ್ಷೇತ್ರವನ್ನುಆಯ್ಕೆಮಾಡಿಕೊಂಡರು.. ಅಲ್ಲಿಂದ ತಾನು ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದೆ ಎಂದು ಮನೀಷ್ ಅನೂಪ್ ಬಿಸ್ಟ್‌ರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಮನೀಷ್‌ರಿಗೆ ತರಬೇತಿ ಮಾತ್ರವಲ್ಲ ಆರ್ಥಿಕ ಸಹಾಯವನ್ನು ಅನೂಪ್ ನೀಡಿದ್ದರು. ನಂತರ 2011ರಲ್ಲಿ ಉತ್ತರಾಖಂಡ ಪೊಲೀಸ್‌ನಲ್ಲಿ ಕ್ರೀಡಾ ಕೋಟದಲ್ಲಿ ಮನೀಷ್‌ಗೆ ಕೆಲಸ ಸಿಕ್ಕಿತ್ತು. 2012ರಲ್ಲಿಅವರು ಆಲ್‌ಇಂಡಿಯ ಪೊಲೀಸ್ ಚಾಂಪಿಯನ್ ಶಿಪ್‌ನ ನಡಿಗೆ ಸ್ಪರ್ಧೆಯಲ್ಲಿ ಕಂಚು ಗೆದ್ದರು. ಒಂದು ಗಂಟೆ ಇಪ್ಪತ್ತೈದು ನಿಮಿಷ ಸಮಯದಲ್ಲಿ ಇಲ್ಲಿ ದೂರವನ್ನು ಕ್ರಮಿಸಿದ್ದರು. ಲಂಡನ್ ಒಲಿಂಪಿಕ್‌ನಲ್ಲಿ ಕಂಚು ಪಡೆದಿದ್ದ ಕ್ರೀಡಾಪಟು ಒಂದು ಗಂಟೆ 22 ನಿಮಿಷದಲ್ಲಿ ಅವರಷ್ಟೇ ದೂರವನ್ನು ಕ್ರಮಿಸಿದ್ದರು. ಇದನ್ನು ನೋಡಿದ ಕೋಚ್ ಅನೂಪ್ ಸರ್ ಮನೀಷ್ ನಿನ್ನ ಗುರಿ ಒಲಿಂಪಿಕ್ ಎಂದು ಆಗ ಹೇಳಿದ್ದರು.ತಯಾರಿಗಾಗಿ ಪಟಿಯಾಲಕ್ಕೆ ಹೋಗಬೇಕೆಂದು ಸಲಹೆ ನೀಡಿದರು. ಅದರಂತೆ ಮನೀಷ್ ಪಟಿಯಾಲಕ್ಕೆ ಹೋದರು. ಅನೂಪ್ ಸರ್ ಅವರಿಗೆ ಬೇಕಾದ ಸಹಾಯಹಸ್ತ ಚಾಚುತ್ತಲೇ ಇದ್ದರು. ಹೀಗೆಲ್ಲ ಹಾದಿ ಕ್ರಮಿಸಿದ ವೈಟರ್ ಹುಡುಗ ಇದೀಗ ಒಲಿಂಪಿಕ್ಸ್‌ನ ಮೆಟ್ಟಲಲ್ಲಿ ಬಂದು ನಿಂತಿದ್ದಾನೆ. ಭಾರತಕ್ಕೆ ನಡಿಗೆ ವಿಭಾಗದಲ್ಲಿ ಪದಕ ದೊರಕಿಸಿಕೊಡುವ ಕನಸು ಕಾಣುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News