ಕೇರಳದ ಅನಾಸ್‌ಗೆ ಒಲಿಂಪಿಕ್ಸ್‌ನಲ್ಲಿ ದೊಡ್ಡ ಸಾಧನೆಯ ಕನಸು
ತಿರುವನಂತಪುರ, ಆ.1: ಹನ್ನೆರಡು ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪುರುಷರ 400 ಮೀಟರ್ ಓಟದಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡ ಮೊದಲ ಅಥ್ಲೀಟ್ ಮುಹಮ್ಮದ್ ಅನಾಸ್. ಕೇರಳದ ಈ ಯುವಕ ದೊಡ್ಡ ಸಾಧನೆಯ ಮಾಡುವ ಕನಸಿನೊಂದಿಗೆ ರಿಯೋ ಒಲಿಂಪಿಕ್ಸ್‌ಗೆ ತೆರಳಿದ್ದಾರೆ.
2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಕೇರಳದ ಕೆ.ಮ್ಯಾಥ್ಯೂ ಬಿನು ಒಲಿಂಪಿಕ್ಸ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡು ಮಹಿಳೆಯರ 400 ಮೀಟರ್ ಓಟದ ಸೆಮಿಫೈನಲ್ ತಲುಪಿ ತನ್ನ ಅಭಿಯಾನ ಕೊನೆಗೊಳಿಸಿದ್ದರು. ಅದೇ ರಾಜ್ಯದ 21ರ ಹರೆಯದ ಅಥ್ಲೀಟ್ ಅನಾಸ್ ಇದೀಗ ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಗೆ ತಯಾರಾಗಿದ್ದಾರೆ,
ಮಿಲ್ಕಾ ಸಿಂಗ್, ಕೆ.ಎಂ. ಬಿನು ಅವರ ಬಳಿಕ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಸ್ಪರ್ಧೆಗೆ ಅವಕಾಶ ಪಡೆದ ಮೂರನೆ ಭಾರತೀಯ ಅನಾಸ್. ಅನಾಸ್ 400 ಮೀಟರ್ ಓಟದ ಜೊತೆಗೆ 400 ಮೀಟರ್ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ರಿಲೇ ತಂಡ ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಮೂರನೆ ಬಾರಿ ಅವಕಾಶ ಗಿಟ್ಟಿಸಿಕೊಂಡಿದೆ.
ಕೇರಳದ ಕೊಲ್ಲಂ ಜಿಲ್ಲೆಯ ನಿಲಾಮೆಲ್ ಪಂಚಾಯತ್ ಕಚೇರಿ ಬಳಿಗೆ ಹೋದರೆ ಅಲ್ಲಿ ಅನಾಸ್‌ನ ಸಾಧನೆಯ ವಿವರನ್ನೊಳಗೊಂಡ ಫ್ಲೆಕ್ಸ್ ಬೋರ್ಡ್ ಗಮನ ಸೆಳೆಯುತ್ತದೆ.ನಿಲಾಮೆಲ್ ಪಟ್ಟಣದ ಅಲ್ಲಲ್ಲಿ ಅನಾಸ್ ಸಾಧನೆಯ ವಿವರ ಇರುವ ಫಲಕಗಳು ರಾರಾಜಿಸುತ್ತದೆ. ಅಲ್ಲಿನ ಪಂಚಾಯತ್ ಅನಾಸ್ ಸಾಧನೆಯನ್ನು ಗುರುತಿಸಿಲ್ಲ. ಈ ಕಾರಣಕ್ಕಾಗಿ ಅವರ ಅಭಿಮಾನಿಗಳು ಅನಾಸ್ ಸಾಧನೆಯನ್ನು ಪಂಚಾಯತ್‌ನ ಮುಂದೆ ಇರಿಸಿದ್ದಾರೆ.
ಪಕ್ಕದ ಚಾಂಡ್ಯಮಂಗಳಂ ಪಂಚಾಯತ್‌ನಲ್ಲಿ ಫುಟ್ಬಾಲ್ ಆಟಗಾರರಿಗೆ ಸಾರ್ವಜನಿಕ ಸಮಾರಂಭದಲ್ಲಿ ಅಭಿನಂದಿಸಿತ್ತು. ಆದರೆ ನಿಲಾಮೆಲ್ ಪಂಚಾಯತ್ ವ್ಯಾಪ್ತಿಯ ನಿವಾಸಿ ಅನಾಸ್ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರೂ, ಅವರನ್ನು ಗುರುತಿಸುವ ನಿಟ್ಟಿನಲ್ಲಿ ಪಂಚಾಯತ್ ಆಡಳಿತ ವಿಫಲಗೊಂಡಿತು ಎಂದು ಅವರ ಸ್ನೇಹಿತರು ಆಪಾದಿಸಿದ್ದಾರೆ.
ಅನಾಸ್ ಜೂ.25ರಂದು ಪೊಲೆಂಡ್‌ನಲ್ಲಿ ನಡೆದ 400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಪಡೆದಿದ್ದರು. 45.40 ಸೆಕೆಂಡ್‌ಗಳಲ್ಲಿ ಗುರಿ ತಲುಪುವುದರೊಂದಿಗೆ 12 ವರ್ಷಗಳ ಹಿಂದೆ ರಾಜೀವ್ ಅರೊಕಿಯಾ(45.60 ಸೆ.) ದಾಖಲೆಯನ್ನು ಮುರಿದಿದ್ದರು.
ಅನಾಸ್ ಓಟ ರಕ್ತಗತವಾಗಿ ಬಂದ ಬಳುವಳಿ. ಅವರ ತಂದೆ ಓಟಗಾರ. ಆದರೆ ಅವರಿಗೆ ಹೆಚ್ಚಿನ ಪ್ರೋತ್ಸಾಹದ ಕೊರೆತೆಯಿಂದಾಗಿ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ಪುತ್ರನಿಗೆ ತನಗೆ ಆಗಿರುವ ಪರಿಸ್ಥಿತಿ ಬಂದೊಗದಂತೆ ಎಚ್ಚರವಹಿಸಿದರು. ಅವನಿಗೆ ಪ್ರೋತ್ಸಾಹ ನೀಡಿದರು. ತಂದೆ ಕನಸನ್ನು ಸಾಕಾರಗೊಳಿಸಲು ಹೊರಟಿದ್ದಾರೆ ಅನಾಸ್.
ಅನಾಸ್ ಚಿಕ್ಕಂದಿನಲ್ಲಿ ಲಾಂಗ್ ಜಂಪ್ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರು. ಆದರೆ ಅವರಿಗೆ ಎಂಎಂಎಚ್‌ಎಸ್ ಶಾಲೆಯ ಬೇಸಿಗೆ ಶಿಬಿರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ. ಅನಾರ್ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಓಟದ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದರು. ಕೋಥಮಂಗಲಮ್‌ನಲ್ಲಿ ನಡೆದ ಕ್ರೀಡಾ ಕೂಟದಲ್ಲಿ 400 ಮೀಟರ್ ಓಟ ಮತ್ತು 400 ಮೀಟರ್ ಹರ್ಡೆಲ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಮಾಡಿಕೊಟ್ಟರು. ಅಲ್ಲಿ ಯಶಸ್ವಿಯಾದ ಅನಾಸ್ ಮತ್ತೆ ಹಿಂತಿರುಗಿ ನೋಡಲಿಲ್ಲ. ರಿಯೋ ಒಲಿಂಪಿಕ್ಸ್‌ಗೆ ತಲುಪಿದ್ದಾರೆ.
ಮುಹಮ್ಮದ್ ಅನಾಸ್ ಸಾಧನೆ
*ಪುರುಷರ 400 ಮೀಟರ್ ವಿಭಾಗದಲ್ಲಿ ರ್ಯಾಂಕಿಂಗ್: ನಂ. 74
*ಪುರುಷ ಓಟಗಾರರಲ್ಲಿ ರ್ಯಾಂಕಿಂಗ್: 1224
*ವೈಯಕ್ತಿಕ ಸಾಧನೆ
*ಎಪ್ರಿಲ್ 2019: ಫೆಡರೇಶನ್‌ನ ಕಪ್ ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ( 45.74 ಸೆ).
*ಜೂ.26, 2016: ಪೊಲೆಂಡ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ 45.40 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಒಲಿಂಪಿಕ್ಸ ಟಿಕೆಟ್.
*ಒಲಿಂಪಿಕ್ಸ್‌ನ ಸ್ಪರ್ಧಾ ದಿನಾಂಕ
ಆ.13: ಪುರುಷರ 400 ಮೀಟರ್ ಓಟ
ಆ.20 :4x 400 ಮೀಟರ್ ರಿಲೇ