ಡೋಪಿಂಗ್: ‘ಬಿ’ ಮಾದರಿಯ ಟೆಸ್ಟ್‌ನಲ್ಲೂ ಇಂದ್ರಜೀತ್ ಸಿಂಗ್ ಫೇಲ್
ಹೊಸದಿಲ್ಲಿ, ಆ.2: ಭಾರತದ ಶಾಟ್‌ಪುಟ್ ಪಟು ಪಂಜಾಬ್‌ನ ಇಂದ್ರಜೀತ್ ಸಿಂಗ್ ಅವರ ಬಿ’ ಮಾದರಿಯ ಪರೀಕ್ಷೆಯಲ್ಲೂ ಪಾಸಿಟಿವ್ ಕಂಡು ಬಂದಿದ್ದು, ಇದರೊಂದಿಗೆ ಇಂದ್ರಜೀತ್ ಅವರಿಗೆ ರಿಯೋ ಒಲಿಂಪಿಕ್ಸ್‌ಗೆ ತೆರಳುವ ಅವಕಾಶ ದೂರವಾಗಿದೆ.
ಕಳೆದ ವಾರ ‘ಎ’ ಮಾದರಿಯ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿತ್ತು. ಅವರು ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಪತ್ತೆಯಾಗಿತ್ತು. ಜೂನ್ 22ರಂದು ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಇಂದ್ರಜೀತ್ ಸಿಂಗ್ ಜಾಗತಿಕ ಉದ್ದೀಪನಾ ದ್ರವ್ಯ ಘಟಕ(ವಾಡಾ)ದಿಂದ ನಾಲ್ಕು ವರ್ಷಗಳ ನಿಷೇಧ ಎದುರಿಸುವಂತಾಗಿದೆ.
ಕುಸ್ತಿಪಟು ನರಸಿಂಗ್ ಯಾದವ್ ಅವರು ಎ’ ಸ್ಯಾಂಪಲ್‌ನಲ್ಲಿ ಅನುತ್ತೀರ್ಣಗೊಂಡಾಗ ತನ್ನ ವಿರುದ್ಧ ಷಡ್ಯಂತ್ರ ನಡೆದಿರುವುದಾಗಿ ಆರೋಪಿಸಿದ್ದರು. ನಾಡಾ ಸಮಿತಿಯ ಮುಂದೆ ಹೇಳಿಕೆ ನೀಡಿ ಕ್ಲೀನ್ ಚಿಟ್ ಪಡೆದಿದ್ದರು. ಆದರೆ ಇಂದ್ರಜೀತ್ ಅವರ ವಾದವನ್ನು ನಾಡಾ ತಿರಸ್ಕರಿಸಿದೆ. ಇಂದ್ರಜೀತ್ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಪಡೆದಿದ್ದರು. ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಅನೇಕ ಪದಕ ಜಯಿಸಿದ್ದರು.