×
Ad

ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಏಳು ಕ್ರೀಡಾಪಟುಗಳು

Update: 2016-08-02 23:03 IST

 ರಿಯೋ ಡಿ ಜನೈರೊ, ಆ.2: ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ 206 ದೇಶಗಳು ಪಾಲ್ಗೊಳ್ಳುತ್ತಿದೆ. ಪಾಕಿಸ್ತಾನದಿಂದ ಕೇವಲ 7 ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ.

ಪಾಕಿಸ್ತಾನವು ಚಿಕ್ಕದೇಶ ಬರ್ಮುಡಾಕ್ಕಿಂತ ಕಡಿಮೆ ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ಗೆ ಕಳುಹಿಸಿದೆ. ಬರ್ಮುಡಾದಿಂದ 8 ಕ್ರೀಡಾಪಟುಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾಗಿ 68 ವರ್ಷವಾಗಿದೆ. ಈ ಅವಧಿಯಲ್ಲಿ ವಿಶ್ವದರ್ಜೆ ಕ್ರಿಕೆಟಿಗರನ್ನು, ಹಾಕಿ ಆಟಗಾರರನ್ನು, ಮತ್ತು ಸ್ಕ್ವಾಷ್ ಆಟಗಾರರನ್ನು ರೂಪಿಸಿದ್ದ ಪಾಕಿಸ್ತಾನ ತಂಡಕ್ಕೆ ಆಂತರಿಕ ಸಮಸ್ಯೆ ಉತ್ತಮ ಕ್ರೀಡಾಳುಗಳನ್ನು ರೂಪಿಸುವಲ್ಲಿ ಅಡಚಣೆಯಾಗಿದೆ.

 ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಸಾಧನೆ ಅತ್ಯಂತ ಕಡಿಮೆ. ಪಾಕಿಸ್ತಾನ ಈ ವರೆಗೆ 10 ಪದಕಗಳನ್ನು ಗೆದ್ದುಕೊಂಡಿದೆ. 8 ಪದಕಗಳು ಫೀಲ್ಡ್ ಹಾಕಿ ಮೂಲಕ ಬಂದಿವೆ. ವೈಯಕ್ತಿಕ ಪದಕಗಳು ಎರಡು.

1948ರಲ್ಲಿ ಪಾಕಿಸ್ತಾನದ ಹಾಕಿ ತಂಡ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಭಾಗವಹಿಸಿತ್ತು. ಆ ಬಳಿಕ ಮೊದಲ ಬಾರಿ ಪಾಕಿಸ್ತಾನ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ.

 ಅಥ್ಲೆಟಿಕ್ಸ್‌ನಲ್ಲಿ ಇಬ್ಬರು, ಶೂಟಿಂಗ್ ಮತ್ತು ಸ್ವಿಮ್ಮಿಂಗ್‌ನಲ್ಲಿ ತಲಾ ಇಬ್ಬರು ಮತ್ತು ಜುಡೋದಲ್ಲಿ ಓರ್ವ ಕ್ರೀಡಾಪಟು ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ನಾಲ್ಕು ಪುರುಷರ ಮತ್ತು ಮೂರು ಮಂದಿ ಕ್ರೀಡಾಪಟುಗಳು ಪಾಕಿಸ್ತಾನದಿಂದ ರಿಯೋ ಒಲಿಂಪಿಕ್ಸ್‌ಗೆ ತೆರಳಿದ್ದಾರೆ.

 ಪಾಕಿಸ್ತಾನ ಈ ತನಕ ಪಡೆದಿರುವ 10 ಪದಕಗಳಲ್ಲಿ ಚಿನ್ನ 3, ಬೆಳ್ಳಿ 3 ಮತ್ತು ಕಂಚು 3. ಪಾಕಿಸ್ತಾನಕ್ಕೆ ಮೂರು ಚಿನ್ನದ ಪದಕಗಳು ಹಾಕಿಯಿಂದ ಬಂದಿದೆ ಎನ್ನುವುದು ವಿಶೇಷ.

 1960, 1968 ಮತ್ತು 1984ರಲ್ಲಿ ಪಾಕಿಸ್ತಾನ ಹಾಕಿಯಲ್ಲಿ ಚಿನ್ನ ಜಯಿಸಿತ್ತು. 1992ರಲ್ಲಿ ಕೊನೆಯ ಬಾರಿ ಪಾಕಿಸ್ತಾನ ಹಾಕಿಯಲ್ಲಿ ಕಂಚು ಜಯಿಸಿತ್ತು. 2008ರಲ್ಲಿ 8ನೆ, 2012ರಲ್ಲಿ 7ನೆ ಸ್ಥಾನ ಪಡೆದಿತ್ತು.2014ರಲ್ಲಿ ವಿಶ್ವಕಪ್‌ಗೆ ತೇರ್ಗಡೆಯಾಗುವಲ್ಲಿ ವೈಫಲ್ಯ ಅನುಭವಿಸಿದ ಪಾಕಿಸ್ತಾನ ಇದೀಗ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದೆ.

‘‘ ಪಾಕಿಸ್ತಾನ ಮೊದಲ ಬಾರಿ ಫೀಲ್ಡ್ ಹಾಕಿಯಲ್ಲಿ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆಯುವಲ್ಲಿ ವಿಫಲಗೊಂಡಿರುವುದು ದೊಡ್ಡ ಹಿನ್ನಡೆಯಾಗಿದೆ’’ ಎಂದು ಪಾಕಿಸ್ತಾನ ಒಲಿಂಪಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಆರೀಫ್ ಖಾನ್ ಹೇಳಿದ್ದಾರೆ. ‘‘ ಪಾಕಿಸ್ತಾನ ಹಾಕಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಮತ್ತು 4ಬಾರಿ ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿತ್ತು. ಇದು ಪಾಕಿಸ್ತಾನದ ದೊಡ್ಡ ಸಾಧನೆ. ಆದರೆ ಈಗ ತಂಡದ ಸಾಧನೆ ತೃಪ್ತಿಕರವಾಗಿಲ್ಲ’’ ಎಂದು 1984ರಲ್ಲಿ ಕೊನೆಯ ಬಾರಿ ಚಿನ್ನ ಜಯಿಸಿದ ಹಾಕಿ ತಂಡದ ನಾಯಕ ಹನೀಫ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಈ ಬಾರಿ ಜುಡೋದಲ್ಲಿ ಪದಕ ಗೆಲ್ಲುವ ಅವಕಾಶ ಇದೆ. ಪುರುಷರ ಜುಡೋ ಸ್ಪರ್ಧೆಗೆ ತಯಾರಾಗಿರುವ ಶಾ ಹುಸೈನ್ ಶಾ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಶಾ ಹುಸೈನ್ ಅವರ ತಂದೆ ಹುಸೈನ್ ಶಾ 1988ರಲ್ಲಿ ಸೀಯೊಲ್ ಗೇಮ್ಸ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು.

‘‘ ಜಪಾನ್‌ನಲ್ಲಿ ಕಠಿಣ ತಯಾರಿ ನಡೆಸಿರುವೆ. ನನ್ನ ತಂದೆಯ ಸಾಧನೆಯನ್ನು ಮೀರಿಸುವುದು ನನ್ನ ಗುರಿಯಾಗಿದೆ’’ ಎಂದು ಶಾ ಹುಸೈನ್ ಹೇಳಿದ್ದಾರೆ. ಅವರು ತರಬೇತಿ ಪಡೆಯಲು ಟೋಕಿಯೊದಲ್ಲಿ ನೆಲೆಸಿದ್ದಾರೆ.

,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News