×
Ad

ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಪಂದ್ಯಗಳು ಫಿಕ್ಸ್: ‘ದಿ ಗಾರ್ಡಿಯನ್’ ವರದಿ

Update: 2016-08-02 23:52 IST

 ಹೊಸದಿಲ್ಲಿ, ಆ.2: ಒಲಿಂಪಿಕ್ಸ್‌ನಲ್ಲಿನ ಹೆಚ್ಚಿನ ಬಾಕ್ಸಿಂಗ್ ಪಂದ್ಯಗಳು ಫಿಕ್ಸ್ ಆಗಿವೆ ಎಂದು ಬ್ರಿಟಿಷ್ ದಿನಪತ್ರಿಕೆ ‘ದಿ ಗಾರ್ಡಿಯನ್’ ವರದಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ರಿಯೋ ಡಿ ಜನೈರೊದಲ್ಲಿ ಆರಂಭವಾಗಲಿರುವ ಒಲಿಂಪಿಕ್ ಗೇಮ್ಸ್‌ನ ಬಾಕ್ಸಿಂಗ್ ಸ್ಪರ್ಧೆಯ ಮೇಲೆ ಊಹಾಪೋಹದ ಕಾರ್ಮೋಡ ಆವರಿಸಿದೆ.

ಬಾಕ್ಸಿಂಗ್ ಪಂದ್ಯಗಳ ಎದುರಾಳಿಗಳನ್ನು ನಿರ್ಧರಿಸುವಲ್ಲಿ ತೀರ್ಪುಗಾರರು ಹಾಗೂ ರೆಫರಿಗಳು ಹಸ್ತಕ್ಷೇಪ ನಡೆಸಲಿದ್ದಾರೆ ಎಂದು ‘ಗಾರ್ಡಿಯನ್’ ವರದಿ ಮಾಡಿದೆ. ಆದರೆ, ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್(ಎಐಬಿಎ) ಇದೆಲ್ಲವೂ ಊಹಾಪೋಹ ಎಂದು ಹೇಳಿ ವರದಿಯನ್ನು ತಳ್ಳಿ ಹಾಕಿದೆ.

  ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕಗಳನ್ನು ನಿರ್ಧರಿಸಲಿರುವ ಪಂದ್ಯಗಳು ಸೇರಿದಂತೆ ಹೆಚ್ಚಿನ ಪಂದ್ಯಗಳು ಫಿಕ್ಸ್ ಆಗುವ ಸಾಧ್ಯತೆಯಿದೆ. ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ನಿರ್ದಿಷ್ಟ ಬಾಕ್ಸರ್‌ಗಳು ಗೆಲ್ಲುವಂತೆ ಮಾಡಲು ಡ್ರಾ ಪ್ರಕ್ರಿಯೆ ಹಾಗೂ ತೀರ್ಪಿನ ಪದ್ದತಿಯಲ್ಲಿ ಹಸ್ತಕ್ಷೇಪ ನಡೆಸಲಿದ್ದಾರೆ ಎಂದು ಎಂದು ಅಮೆಚೂರ್ ಬಾಕ್ಸಿಂಗ್‌ನ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಬ್ರಿಟನ್‌ನ ದಿನಪತ್ರಿಕೆ ಸೋಮವಾರ ವರದಿ ಮಾಡಿದೆ.

2015ರ ಜೂನ್‌ನಿಂದ ನಮ್ಮ ವ್ಯವಹಾರ ಹಾಗೂ ಕ್ರೀಡಾ ಪಾಲುದಾರರ ಬಯಕೆಯಂತೆ ಹಾಗೂ ವಿಶ್ವದಾದ್ಯಂತವಿರುವ ಎಐಬಿಎ ಸಮುದಾಯದ ಲಾಭಕ್ಕಾಗಿ ದೀರ್ಘಕಾಲಿನ ಬೆಳವಣಿಗೆಗಾಗಿ ಹಲವು ಮುಖ್ಯ ಆಡಳಿತಾತ್ಮಕ ಬದಲಾವಣೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಎಐಬಿಎ ವಕ್ತಾರರು ದಿ ಗಾಡಿರ್ಯನ್ ಪತ್ರಿಕೆಗೆ ತಿಳಿಸಿದ್ದಾರೆ.

 ಪ್ರಮುಖ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಸ್ಕೋರ್‌ಗಳ ಮೇಲೆ ಹಸ್ತಕ್ಷೇಪ ನಡೆಸಲಾಗುತ್ತದೆ. ಫಿಕ್ಸಿಂಗ್‌ನ್ನು ನಿಗೂಢವಾಗಿ ನಡೆಸಲಾಗುತ್ತದೆ. ಸ್ಕೋರ್ ಯಂತ್ರದಲ್ಲಿ ಇದನ್ನು ಪತ್ತೆ ಹಚ್ಚುವುದು ಅಷ್ಟೊಂದು ಸುಲಭವಲ್ಲ. ಇದೇ ರೀತಿ ರಿಯೋ ಗೇಮ್ಸ್‌ನಲ್ಲೂ ನಡೆಯುವ ಸಾಧ್ಯತೆಯಿದೆ ಎಂದು ‘ದಿ ಗಾರ್ಡಿಯನ್’ಗೆ ಮತ್ತೊಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ.

ರಿಯೋ ಗೇಮ್ಸ್‌ನಲ್ಲಿ ಬಾಕ್ಸಿಂಗ್ ಸ್ಪರ್ಧೆಗಳು ಆಗಸ್ಟ್ 6 ರಿಂದ ಆರಂಭವಾಗಲಿದೆ. ಪುರುಷರ ಲೈಟ್ ಫ್ಲೈವೇಟ್, ಲೈಟ್‌ವೇಟ್, ಲೈಟ್ ಹೇವಿವೇಟ್ ಹಾಗೂ ಹೇವಿವೇಟ್ ಸ್ಪರ್ಧೆಗಳು ನಡೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News