×
Ad

100 ಮೀ. ಓಟದಲ್ಲಿ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಅಥ್ಲೀಟ್ ದ್ಯುತಿ

Update: 2016-08-02 23:54 IST

ಹೊಸದಿಲ್ಲಿ, ಆ.2: ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ಸುಮಾರು 36 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ 100 ಮೀ. ಓಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಭಾರತದ ಮೊದಲ ಅಥ್ಲೀಟ್.

1980ರಲ್ಲಿ ಮಾಸ್ಕೊ ಗೇಮ್ಸ್‌ನಲ್ಲಿ ಓಟದ ರಾಣಿ ಪಿ.ಟಿ. ಉಷಾ 100 ಮೀ. ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ ದೇಶವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು. 1988ರ ಸಿಯೋಲ್ ಗೇಮ್ಸ್‌ನಲ್ಲಿ ಅರ್ಹತಾ ಮಾನದಂಡ ಜಾರಿಗೆ ಬಂದ ಬಳಿಕ ದ್ಯುತಿ ಒಲಿಂಪಿಕ್ಸ್‌ಗೆ ಆಯ್ಕೆಯಾದ ಮೊದಲ ಅಥ್ಲೀಟ್.

 ಕಝಕ್‌ಸ್ತಾನದ ಅಲ್ಮಾಟಿಯಲ್ಲಿ ನಡೆದ ಇಂಟರ್‌ನ್ಯಾಶನಲ್ ಅಥ್ಲೀಟ್ ಕೂಟದಲ್ಲಿ 11.30 ಸೆಕೆಂಡ್‌ನಲ್ಲಿ ಗುರಿ ತಲುಪಿದ ದ್ಯುತಿ 100 ಮಿ. ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಓಟಗಾರ್ತಿ ಎನಿಸಿಕೊಂಡಿದ್ದರು. ಅದೇ ಟೂರ್ನಿಯ ಫೈನಲ್‌ನಲ್ಲಿ 11.24 ಸೆಕೆಂಡ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

 ದ್ಯುತಿ ದೇಹದಲ್ಲಿ ಪುರುಷ ಹಾರ್ಮೋನು ಅಧಿಕವಿದೆ. ಆಕೆ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹವಿಲ್ಲ ಎಂಬ ಕಾರಣಕ್ಕೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಒಕ್ಕೂಟ ಎಐಎಫ್‌ಎಫ್ ಸೂಚನೆಯ ಮೇರೆಗೆ ದ್ಯುತಿ ಅನಿರ್ದಿಷ್ಟಾವಧಿ ನಿಷೇಧ ಎದುರಿಸಿದ್ದರು. ಸ್ವಿಸ್‌ನಲ್ಲಿರುವ ಜಾಗತಿಕ ಕ್ರೀಡಾ ಪಂಚಾಯತಿ ನ್ಯಾಯಾಲಯದ ಮೊರೆ ಹೋದ ದ್ಯುತಿ 2015ರ ಜುಲೈನಲ್ಲಿ ಕಾನೂನು ಹೋರಾಟದಲ್ಲಿ ಜಯ ಶಾಲಿಯಾಗಿ ಅಥ್ಲೀಟ್ ಕಣಕ್ಕೆ ಮರಳಿದರು.

ಪ್ರಮುಖ ಸಾಧನೆಗಳು

-ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ

-ಏಷ್ಯನ್ ಜೂನಿಯರ್ ಚಾಂಪಿಯನ್

- ಏಷ್ಯನ್ ಒಳಾಂಗಣ ಚಾಂಪಿಯನ್‌ಶಿಪ್‌ನಲ್ಲಿ ಕಂಚು

-ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ

-5 ಎಕ್ಸ್ ನ್ಯಾಶನಲ್ ಚಾಂಪಿಯನ್

ಮಣಿಪುರದ ವೇಟ್‌ಲಿಫ್ಟರ್ ಮಿರಾಬಾಯಿ ಚಾನು

 ಹೊಸದಿಲ್ಲಿ, ಆ.2: ಪಟಿಯಾಲದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮಣಿಪುರದ 21ರ ಹರೆಯದ ಮಿರಾಬಾಯಿ ಚಾನು 48 ಕೆಜಿ ತೂಕ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ರಿಯೋ ಗೇಮ್ಸ್‌ಗೆ ತೇರ್ಗಡೆಯಾಗಿದ್ದರು.

ಒಲಿಂಪಿಕ್ಸ್‌ಗೆ ತೇರ್ಗಡೆಯಾಗುವ ಹಾದಿಯಲ್ಲಿ ಚಾನು ಎರಡು ರಾಷ್ಟ್ರೀಯ ದಾಖಲೆಗಳನ್ನು ಮುರಿದಿದ್ದರು. 85 ಕೆಜಿ ತೂಕ ಎತ್ತುವುದರೊಂದಿಗೆ ತನ್ನದೇ ದಾಖಲೆಯನ್ನು ಮುರಿದಿದ್ದ ಚಾನು 192 ಕೆಜಿ ತೂಕ ಎತ್ತುವ ಮೂಲಕ 12 ವರ್ಷಗಳ ಹಿಂದೆ ತನ್ನ ಕೋಚ್ ಹಾಗೂ ಹಿರಿಯ ವೇಟ್‌ಲಿಫ್ಟರ್ ಕುಂಜರಾಣಿ ದೇವಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು.

2014ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಹಾಗೂ 2016ರ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿನ ಚಿನ್ನದ ಪದಕ ಚಾನು ಅವರ ಪ್ರಮುಖ ಸಾಧನೆ.

ಸೈಖೋಮ್ ಮಿರಾಬಾಯಿ ಚಾನು

ವರ್ಷ: 21

ಎತ್ತರ: 1.15 ಮೀ.

ಸ್ಪರ್ಧೆ(ಕ್ರೀಡೆ):ವೇಟ್‌ಲಿಫ್ಟಿಂಗ್

 ವಿಭಾಗ: 48 ಕೆ.ಜಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News